Bengaluru

ರಾಜ್ಯದಲ್ಲಿ ಆಜಾನ್‌-ಭಜನೆ ಸಂಘರ್ಷ; ಸಿಎಂ ಭೇಟಿಯಾದ ಅಲ್ಪಸಂಖ್ಯಾತರ ನಿಯೋಗ

ಬೆಂಗಳೂರು: ಆಜಾನ್‌-ಭಜನೆ ಹೆಸರಿನಲ್ಲಿ ಕೋಮ ಸೌಹಾರ್ದತೆ ಕದಡದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್‌ ಅಲ್ಪಸಂಖ್ಯಾತ ಶಾಸಕರ ನಿಯೋಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಮಾಡಿದೆ. ಯು.ಟಿ.ಖಾದರ್, ಎನ್.ಎ.ಹ್ಯಾರೀಸ್ ಹಾಗು ನಜೀರ್ ಅಹಮ್ಮದ್ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿತು. ಸುಪ್ರೀಂಕೋರ್ಟ್ ಆದೇಶವನ್ನು ಮಸೀದಿಗಳು ಪಾಲಿಸಲಿದೆ ಎಂದೂ ಸಿಎಂಗೆ ಇದೇ ವೇಳೆ ಭರವಸೆ ನೀಡಿದ್ದಾರೆ.

 

ಸಿಎಂ ಭೇಟಿ ಬಳಿಕ ಮಾತನಾಡಿದ ಶಾಸಕ ಯು.ಟಿ.ಖಾದರ್, ರಾಜ್ಯದಲ್ಲಿ ಶೇ.99ರಷ್ಟು ಜನ ಶಾಂತಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಕೆಲವು ಶಕ್ತಿಗಳು ಕೆಲವು ವಿಚಾರಗಳಿಗೆ ಅಶಾಂತಿ ಸೃಷ್ಟಿಸುತ್ತಿವೆ. ಸರ್ಕಾರ ಶಾಂತಿಯುತ, ಸಾಮರಸ್ಯ ಸಮಾಜ ನಿರ್ಮಿಸಬೇಕು ಎಂದರು.  ಶ್ರೀರಾಮಸೇನೆ ವಿರುದ್ಧ ನಾವು ಹೋರಾಟ ಮಾಡುವುದಿಲ್ಲ, ಕಾನೂನು ಹೋರಾಟವನ್ನೂ ಮಾಡುವುದಿಲ್ಲ. ಆದ್ರೆ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಿಎಂ ಕೂಡ ಎಲ್ಲ ರೀತಿಯ ಕ್ರಮ ಕೈಗೊಳ್ಳುವ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಎಲ್ಲ ರೀತಿಯ ಶಬ್ದ ಮಾಲಿನ್ಯಗಳ ಕುರಿತಾಗಿ ಸರ್ಕಾರ ನಿಯಮ ಮಾಡಲಿ. ಅಂತಿಮವಾಗಿ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಕೋರ್ಟ್ ಆದೇಶದಂತೆ ನಿಯಮ ರೂಪಿಸಲಿ ಎಂದು ತಿಳಿಸಿದರು.

Share Post