National

ಕಾಂಗ್ರೆಸ್‌ ಸಚಿವನ ಪುತ್ರನ ವಿರುದ್ಧ ಅತ್ಯಾಚಾರ ಆರೋಪ; ಎಫ್‌ಐಆರ್‌ ದಾಖಲು

ನವದೆಹಲಿ: ಯುವತಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ರಾಜಸ್ಥಾನದ ಕಾಂಗ್ರೆಸ್‌ ಸಚಿವನ ಪುತ್ರನ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ರಾಜಸ್ಥಾನ ಸರ್ಕಾರದಲ್ಲಿ ಸಚಿವರಾಗಿರುವ ಮಹೇಶ್‌ ಜೋಶಿ ಪುತ್ರ ರೋಹಿತ್‌ ಜೋಶಿ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿತ್ತು.  ಜೈಪುರ ಮತ್ತು ದೆಹಲಿಯಲ್ಲಿ ಹಲವು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ 23 ವರ್ಷದ ಯುವತಿ ನಿನ್ನೆ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು, ರೋಹಿತ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

   ದಕ್ಷಿಣ ದೆಹಲಿ ಠಾಣೆ ಪೊಲೀಸರು ಅತ್ಯಾಚಾರ ಹಾಗೂ ಮತ್ತು ಬರಿಸುವ ಪದಾರ್ಥ ನೀಡಿರುವುದು, ಗರ್ಭಪಾತ, ಮದುವೆಯಾಗಲು ಬಲವಂತ-ಅಪಹರಣ ಆರೋಪದಡಿ ಹಲವು ಕಲಂಗಳಡಿ ಕೇಸ್‌ ದಾಖಲಿಸಿದ್ದಾರೆ. ರೋಹಿತ್‌ ಜೋಶಿ, ಫೇಸ್‌ಬುಕ್‌ ಮೂಲಕ ನನಗೆ ಕಳೆದ ವರ್ಷ ಪರಿಚಯವಾದರು. ನಂತರ ಮೊದಲ ಬಾರಿ ನಾವು ಜೈಪುರದಲ್ಲಿ ಭೇಟಿಯಾದೆವು. ನಂತರ ನನ್ನನ್ನು ಜನವರಿ 8, 2021ರಂದು ಜೈಪುರದ ಸವಾಯಿ ಮಾಧವ್ ಪುರಕ್ಕೆ ಕರೆಸಿಕೊಂಡರು. ಈ ಸಂದರ್ಭದಲ್ಲಿ ರಾತ್ರಿ ನನಗೆ ಮತ್ತು ಬರುವ ಪಾನೀಯ ಸೇವಿಸಲು ಕೊಟ್ಟಿದ್ದಾರೆ. ಮರುದಿನ ಬೆಳಗ್ಗೆ ಎದ್ದಾಗ ನಾನು ನಗ್ನವಾಗಿರುವ ಫೋಟೋ ಮತ್ತು ವಿಡಿಯೋವನ್ನು ಅವರು ನನಗೆ ತೋರಿಸಿದರು. ನನಗೆ ತುಂಬಾ ಭಯವಾಯಿತು ಮತ್ತು ನಾನು ಅಳುವುದಕ್ಕೆ ಶುರು ಮಾಡಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ. ಇದೇ ವಿಚಾರ ಎಫ್ಐಆರ್‌ನಲ್ಲಿ ದಾಖಲಾಗಿದೆ.

        ನಾವು ಉಳಿದುಕೊಂಡಿದ್ದ ಹೊಟೇಲ್‌ನಲ್ಲಿ ನಾವಿಬ್ಬರು ಗಂಡ, ಹೆಂಡತಿ ಎಂದು ಅವರು ನಮೂದಿಸಿದ್ದರು. ನಂತರ ಅವರು ನನ್ನನ್ನು ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದರು. ಆದ್ರೆ, ನನಗೆ ಕೈಕೊಟ್ಟಿದ್ದಾರೆ ಎಂದೂ ಯುವತಿ ಆರೋಪಿಸಿದ್ದಾರೆ.

Share Post