ದೆಹಲಿ ಸಿಎಂ ಕೇಜ್ರಿವಾಲ್‌ಗೆ ಬೆದರಿಕೆ ಹಿನ್ನೆಲೆ; ಬಿಜೆಪಿ ನಾಯಕ ಬಗ್ಗಾ ಅರೆಸ್ಟ್
ನವದೆಹಲಿ: ಮಾರ್ಚ್ 3ರಂದು ಪಂಜಾಬ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ 8.30ರ ಸುಮಾರಿಗೆ 10 ಮಂದಿ ಪೊಲೀಸರು ನಮ್ಮ ಮನೆಗೆ ಬಂದಿದ್ದರು. ತಜಿಂದರ್‌ನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ ಎಂದು ಅವರ ತಂದೆ ಕೃಪಾಲ್ ಸಿಂಗ್ ಬಗ್ಗಾ ಹೇಳಿಕೆ ನೀಡಿದ್ದಾರೆ.
ಮಾರ್ಚ್ 3ರಂದು ನಡೆದ ಪ್ರತಿಭಟನೆಯ ವೇಳೆ ತಜಿಂದರ್ ಸಿಂಗ್ ಅವರು ಅರವಿಂದ್ ಕೇಜ್ರಿವಾಲ್‌ಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದ್ದು, ತಜಿಂದರ್ ಮಾತನಾಡಿರುವ ಹೇಳಿಕೆ ಮತ್ತು ವಿಡಿಯೊ ಆಧರಿಸಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ತಜಿಂದರ್ ಸಿಂಗ್ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸುಳ್ಳು ವದಂತಿಗಳನ್ನು ಹರಡಿದ್ದಾರೆ. ಜತೆಗೆ, ಧಾರ್ಮಿಕ ಮತ್ತು ಕೋಮು ದ್ವೇಷ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ತಜಿಂದರ್ ವಿರುದ್ಧ ಎಎಪಿ ನಾಯಕ ಸನ್ನಿ ಸಿಂಗ್ ದೂರು ನೀಡಿದ್ದರು.
ತಜಿಂದರ್ ಸಿಂಗ್ ಬಂಧಿಸಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅರವಿಂದ್ ಕೇಜ್ರಿವಾಲ್ ರಾಜಕೀಯ ವಿರೋಧಿಗಳನ್ನು ಬೆದರಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ಪಂಜಾಬ್‌ನಲ್ಲಿ ತಮ್ಮ ಪಕ್ಷದ ರಾಜಕೀಯ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಬಿಕ್ಕಟ್ಟಿನ ಸಮಯದಲ್ಲಿ ದೆಹಲಿಯ ಪ್ರತಿಯೊಬ್ಬ ಪ್ರಜೆಯೂ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರ ಕುಟುಂಬದೊಂದಿಗೆ ನಿಂತಿದ್ದಾರೆ ಎಂದು ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಹೇಳಿದ್ದಾರೆ.