ಗಡಿಯಲ್ಲಿ ಪತ್ತೆಯಾಯ್ತು ನಿಗೂಢ ಸುರಂಗ; ಅಮರನಾಥ್ ಯಾತ್ರೆ ಟಾರ್ಗೆಟ್ ಮಾಡಿದ್ರಾ ಉಗ್ರರು..?
ಸಾಂಬಾ: ಭಾರತ-ಪಾಕಿಸ್ತಾನ ಗಡಿಯಲ್ಲಿ ನಿಗೂಢ ಸುರಂಗವೊಂದು ಪತ್ತೆಯಾಗಿದ್ದು, ಅದರಲ್ಲಿ ನುಸುಳುವಾಗ ಉಸಿರಾಟಕ್ಕಾಗಿ ಆಕ್ಸಿಜನ್ ಪೈಪ್ ಕೂಡಾ ಅಳವಡಿಸಿರುವುದು ಪತ್ತೆಯಾಗಿದೆ. ಅಮರನಾಥ್ ಯಾತ್ರೆ ಶೀಘ್ರದಲ್ಲೇ ಆರಂಭವಾಗಲಿದ್ದು, ಅದರ ಮೇಲೆ ಉಗ್ರರು ಟಾರ್ಗೆಟ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಗಡಿಯುದ್ಧಕ್ಕೂ ಸುರಂಗ ಪತ್ತೆ ತೋಡಲಾಗಿದೆ. ಬಿಎಸ್‌ಎಫ್ ಪಡೆಗಳು ಗಡಿಯುದ್ಧಕ್ಕೂ 265 ಅಡಿ ಉದ್ದದ ಆಕ್ಸಿಜನ್ ಪೈಪ್‌ಗಳನ್ನು ಗುರುತಿಸಿದ್ದು, ಜಮ್ಮು ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು–ಕಾಶ್ಮೀರಕ್ಕೆ ಭೇಟಿ ನೀಡುವ ಸಮಯದಲ್ಲಿ ನುಸುಳುಕೋರರ ಬಗ್ಗೆ ಮಾಹಿತಿ ಸಿಕ್ಕಿತ್ತು. ಪಾಕಿಸ್ತಾನ ಕಡೆಯಿಂದ ಒಳನುಸುಳುವ ಪ್ರಯತ್ನಗಳು ಗಡಿಯಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಬಿಎಸ್ಎಫ್ ಕಟ್ಟೆಚ್ಚರದಿಂದಾಗಿ ಸುರಂಗ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ಸಂಜೆ 5:30ಕ್ಕೆ ಸುರಂಗ ಪತ್ತೆಯಾಗಿತ್ತು. ಅದರೊಳಗೆ ಮರಳಿನ ಹಸಿರು ಚೀಲಗಳಿದ್ದವು. ಅದರ ಉದ್ದ 150 ಮೀಟರ್ ಇದೆ. ಒಳಗಡೆ ಗಡಿಯ ಬೇಲಿವರೆಗೂ 100 ಮೀಟರ್ ಹಾಗೂ ಅಲ್ಲಿಂದ ಮುಂದಕ್ಕೆ 50 ಮೀಟರ್ ಉದ್ದದ ಸುರಂಗ ತೋಡಲಾಗಿದೆ. ಅದು ಕಾಡಿನ ಪ್ರದೇಶಕ್ಕೆ ಹಾದಿ ಸಂಪರ್ಕಿಸುತ್ತದೆ ಎಂದು ತಿಳಿದುಬಂದಿದೆ. ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಪ್ರದೇಶದಲ್ಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ನಡೆಯುವ ಸಮಯದಲ್ಲಿ ದಾಳಿ ನಡೆಸಲು ಉಗ್ರರು ಯೋಜಿಸಿದ್ದರು. ಅದನ್ನು ವಿಫಲಗೊಳಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.