ಸಾಧ್ವಿ ರಿತಂಬರ ಆಶ್ರಮ ಶಾಲೆಯ ನಾಲ್ವರು ಬಾಲಕಿಯರು ನೀರು ಪಾಲು
ಖಾಂಡವಾ: ಮಧ್ಯಪ್ರದೇಶದ ಖಾಂಡವಾ ಜಿಲ್ಲೆಯ ಸಾಧ್ವಿ ರಿತಂಬರ ಅವರ ಆಶ್ರಮದ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಕಾಲುವೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ‘ಮಾಂಧಾತಾ(ಓಂಕಾರೇಶ್ವರ) ಪೊಲೀಸ್ ಠಾಣಾ ವ್ಯಪ್ತಿಯ ಕೋಠಿ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಬಾಲಕಿಯರು 10 ವರ್ಷದವರಾಗಿದ್ದು, 5ನೇ ತರಗತಿಯಲ್ಲಿ ಓದುತ್ತಿದ್ದರು. ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿಯೊಬ್ಬಳು ಮುಳುಗಿದ್ದಾಳೆ. ಆಕೆಯನ್ನು ರಕ್ಷಿಸಲು ಹೋಗಿ ಉಳಿದ ಮೂವರೂ ನೀರು ಪಾಲಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಬಾಲಕಿಯರು ಖರಗೋನ ಜಿಲ್ಲೆಗೆ ಸೇರಿದವರಾಗಿದ್ದಾರೆ. ಶವಗಳನ್ನು ಕಾಲುವೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕಂಬನಿ ಮಿಡಿದಿದ್ದಾರೆ. ಸಾಧ್ವಿ ರಿತಂಬರ ಅವರು ಹಿಂದುತ್ವದ ಪ್ರತಿಪಾದಕಿಯಾಗಿದ್ದು, ‘ಹಿಂದೂ ದಂಪತಿ 4 ಮಕ್ಕಳಿಗೆ ಜನ್ಮ ನೀಡಬೇಕು, ಅವರಲ್ಲಿ ಇಬ್ಬರನ್ನು ದೇಶಕ್ಕೆ ಅರ್ಪಿಸಬೇಕು’ ಎಂದು ಇತ್ತೀಚೆಗೆ ಕರೆ ನೀಡುವ ಮೂಲಕ ಸುದ್ದಿಯಾಗಿದ್ದರು.