ಭವಿಷ್ಯದ ಆರ್ಥಿಕ ಆಘಾತಗಳನ್ನು ತಡೆಯಲು ಸಂಘಟಿತ ಕ್ರಮ ಅಗತ್ಯ; ನಿರ್ಮಲಾ ಸೀತಾರಾಮನ್
ವಾಷಿಂಗ್ಟನ್: ಕೊರೊನಾ ಕಾರಣದಿಂದಾಗಿ ಆರ್ಥಿಕತೆ ಕುಸಿದಿದೆ. ಹೀಗಾಗಿ ಆರ್ಥಿಕತೆ ತ್ವರಿತ ಚೇತರಿಕೆಗೆ ಚುರುಕು ನೀಡಬೇಕು. ಅಲ್ಲದೆ, ಭವಿಷ್ಯದಲ್ಲಿ ಆಗಬಹುದಾದ ಆರ್ಥಿಕ ಆಘಾತಗಳನ್ನು ತಡೆಯಲು ಎಲ್ಲಾ ದೇಶಗಳಲ್ಲಿ ಸಂಘಟಿತ ಕ್ರಮದ ತುರ್ತು ಅಗತ್ಯತೆ ಇದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ವಾಷಿಂಗ್ಟನ್‌ನಲ್ಲಿ ನಡೆದ ಜಿ20 ಉದಯೋನ್ಮುಖ ಮಾರುಕಟ್ಟೆ ಆರ್ಥಿಕತೆಗಳ ಸಭೆಯಲ್ಲಿ ಮಾತನಾಡಿದ ಅವರು, ಆಹಾರ ಮತ್ತು ಇಂಧನ ಭದ್ರತೆ, ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಸಂದಿಗ್ಧತೆಯಲ್ಲಿ ಇಎಂಇ ಮುಂದಿರುವ ಸವಾಲುಗಳ ಅಪಾಯ ಮತ್ತು ಅಲ್ಪಾವಧಿ ನೀತಿಗಳ ಬಗ್ಗೆ ತಮ್ಮ ಆರ್ಥಿಕ ದೃಷ್ಟಿಕೋನದ ಒಳನೋಟಗಳನ್ನು ಹಂಚಿಕೊಂಡರು.
ಪರಿಸರಕ್ಕೆ ಹಾನಿಮಾಡದ, ಸುಸ್ಥಿರ ಮತ್ತು ಆರ್ಥಿಕವಾಗಿಯೂ ಕಾರ್ಯಸಾಧ್ಯವಾದ ಪರ್ಯಾಯಗಳ ಇಂಧನ ಮೂಲಗಳ ಅಗತ್ಯತೆಯ ಕುರಿತು ಮಾತನಾಡಿದ ನಿರ್ಮಲಾ ಸೀತಾರಾಮನ್ ಅವರು , ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಚುರುಕುಗೊಳಿಸಲು ಸೌರಮೈತ್ರಿ ಪರಿಣಾಮಕಾರಿಯಾದ ವೇದಿಕೆಯಾಗಬಹುದು ಎಂದು ಅಭಿಪ್ರಾಯಪಟ್ಟಿರುವುದಾಗಿ ಹಣಕಾಸು ಸಚಿವಾಲಯ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದೆ. ಈ ಸಭೆಯನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್), ಮುಂಬರುವ ಜಿ20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆಗೆ ಪೂರ್ವಭಾವಿಯಾಗಿ ಆಯೋಜಿಸಿತ್ತು.