ಮುಂದುವರಿದ ಎಸಿಬಿ ಅಧಿಕಾರಿಗಳ ದಾಳಿ; ಕೆಎಎಸ್ ಅಧಿಕಾರಿ ರಂಗನಾಥ್ ಆಸ್ತಿಗಳ ಮೇಲೆ ರೇಡ್
ದೊಡ್ಡಬಳ್ಳಾಪುರ: ಎಸಿಬಿ ಅಧಿಕಾರಿಗಳು ಭ್ರಷ್ಟರ ಆಸ್ತಿಗಳ ಮೇಲೆ ದಾಳಿ ಮುಂದುವರೆಸಿದ್ದಾರೆ. ಇಂದು ಕೆಎಎಸ್ ಅಧಿಕಾರಿ ಕೆ.ರಂಗನಾಥ್ಗೆ ಸಂಬಂಧಿಸಿದ ಮನೆ ಸೇರಿದಂತೆ ಏಕಕಾಲದಲ್ಲಿ ಐದು ಕಡೆ ದಾಳಿ ನಡೆಸಿದ್ದಾರೆ.
ರಂಗನಾಥ್ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯಾಗಿದ್ದಾರೆ. ಸದ್ಯ ಅವರು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಸಿಬಿ ಅಧಿಕಾರಿಗಳು, ರಂಗನಾಥ್ ಮನೆ, ಟ್ರಸ್ಟ್ ಸೇರಿದಂತೆ ಐದು ಕಡೆ ದಾಳಿ ನಡೆಸಿದ್ದಾರೆ. ಎಲ್ಲಾ ಕಡೆ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.
ರಂಗನಾಥ್ ಅವರು ಈ ಹಿಂದೆ ಬೆಂಗಳುರು ಉತ್ತರ ತಾಲ್ಲೂಕಿನ ಉಪವಿಭಾಗಾಧಿಕಾರಿಯಾಗತಿದ್ದಾಗ ಸರ್ಕಾರದ ಜಮೀನುಗಳ ಮೂಲ ಮಂಜೂರಾತಿ ದಾಖಲೆಗಳ ಪರಿಶೀಲನೆ ಮಾಡದೇ ಮತ್ತು ಸಂಬಂಧಪಟ್ಟ ತಹಶೀಲ್ದಾರ್ ಅವರಿಂದ ಯಾವುದೇ ವರದಿ ಪಡೆಯದೇ ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನು ಪರಭಾರೆ ಮಾಡಿಕೊಟ್ಟಿದ್ದರು. ಇದಕ್ಕೆ ಸಂಬಂಧಪಟ್ಪಂತೆ ದೂರು ಬಂದ ಹಿನ್ನಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆಯೇ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು, ರಂಗನಾಥ್ಗೆ ಸಂಬಂಧಿಸಿದ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಮನೆ, ದೊಡ್ಡಬಳ್ಳಾಪುರದ ಚೈತನ್ಯನಗರದ ಮನೆ, ದೊಡ್ಡಬಳ್ಳಾಪುರ ನಗರದ ಕನಕಶ್ರೀ ಟ್ರಸ್ಟ್ ಕಚೇರಿ ಮತ್ತು ಪಬ್ಲಿಕ್ ಶಾಲೆ, ಬೆಂಗಳೂರಿನ ನಾಗರಬಾವಿಯಲ್ಲಿರುವ ಸಂಬಂಧಿಕರ ಮನೆ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಉತ್ತರ ತಾಲೂಕಿನ ಉಪವಿಭಾಗಧಿಕಾರಿ ಕಚೇರಿ ಸೇರಿದಂತೆ ಒಟ್ಟು 5 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.