ಓವರ್‌ಟೇಕ್ ಮಾಡಲು ಹೋಗಿ ಅಪಘಾತ; ಹೊತ್ತಿ ಉರಿದ ಲಾರಿಗಳು
ದೇವನಹಳ್ಳಿ: ಓವರ್ ಟೇಕ್ ಮಾಡಲು ಹೋಗಿ ದೇವನಹಳ್ಳಿ ಬಳಿ ಎರಡು ಸಿಮೆಂಟ್ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಎರಡೂ ಲಾರಿಗಳಿಗೂ ಬೆಂಕಿ ತಗುಲಿ ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಲಾರಿ ಚಾಲಕನೊಬ್ಬ ಸಜೀವದಹನವಾಗಿದ್ದಾರೆ. ಮತ್ತೊಬ್ಬ ಚಾಲಕ ಬದುಕುಳಿದಿದ್ದಾನೆ.
ದೇವನಹಳ್ಳಿ ತಾಲೂಕಿನ ಆವತಿ ಬಳಿಯ ಬುಕ್ತಿ ಡಾಬಾ ಮುಂಭಾಗ ಈ ದುರ್ಘಟನೆ ನಡೆದಿದೆ. ಮೃತ ಚಾಲಕನನ್ನು ವಸಂತಕುಮಾರ್ (28) ಗುರುತಿಸಲಾಗಿದೆ. ವಸಂತಕುಮಾರ್ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗೊಟ್ಲಪಲ್ಲಿಯವರು. ಇವರು ಆಂಧ್ರ ಮೂಲದ ಜಮ್ಮಲ್ಲಮಡಗುವಿನ ಡಾಲ್ಮಿ ಕಂಪನಿಯಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಎರಡೂ ಲಾರಿಗಳು ಆಂಧ್ರದ ಡಾಲ್ಮಿ ಕಂಪನಿಯಿಂದ ಸಿಮೆಂಟ್ ತುಂಬಿಕೊಂಡು ಬೆಂಗಳೂರಿನತ್ತ ಬರುತ್ತಿದ್ದವು. ಒಂದು ಲಾರಿ ಬೆಂಗಳೂರು ಹಾಗೂ ಮತ್ತೊಂದು ಲಾರಿ ಮೈಸೂರಿಗೆ ಹೋಗಬೇಕಿತ್ತು. ಆದ್ರೆ ಓವರ್ ಟೇಕ್ ಮಾಡಲು ಹೋಗಿ ಒಂದು ಲಾರಿ ಚಾಲಕ ಮುಂದೆ ಹೋಗುತ್ತಿದ್ದ ಲಾರಿಗೆ ಗುದ್ದಿದ್ದಾನೆ. ಈ ವೇಳೆ ಲಾರಿ ಪಲ್ಟಿಯಾಗಿ ಬೆಂಕಿ ಹೊತ್ತುಕೊಂಡಿದೆ. ಈ ಸಂದರ್ಭದಲ್ಲಿ ಚಾಲಕ ವೇಲು ಮುಂಬದಿಯ ಗ್ಲಾಸ್ ಒಡೆದುಕೊಂಡು ರಸ್ತೆ ಮೇಲೆ ಬಿದ್ದಿದ್ದು, ಅದನ್ನು ಕಂಡ ತಕ್ಷಣ ಸ್ಥಳದಲ್ಲಿದ್ದ ಜನರು ಆತನನ್ನು ರಕ್ಷಿಸಿದ್ದಾರೆ.
ಇತ್ತ ಹಿಂಬದಿಯಿಂದ ಗುದ್ದಿದ ಲಾರಿಯು ನಿಯಂತ್ರಣ ಸಿಗದೇ ಮುಂಬದಿ ಜಖಂಗೊಂಡು ವಿಭಜಕದ ಮೇಲೆ ನಿಂತಿತ್ತು. ಆದರೆ ಘರ್ಷಣೆಯ ರಭಸಕ್ಕೆ ಎರಡೂ ಲಾರಿಗಳು ಬೆಂಕಿ ಹೊತ್ತಿಕೊಂಡು ಉರಿದಿವೆ.