BengaluruCinemaUncategorized

ಹಿರಿಯ ನಟ ಶಿವರಾಂ ವಿಧಿವಶ; ನಾಳೆ ಪೊಲೀಸ್‌ ಗೌರವದೊಂದಿಗೆ ಅಂತ್ಯಕ್ರಿಯೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಹಿರಿಯ ನಟ ಶಿವರಾಂ ವಿಧಿವಶರಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪ್ರಶಾಂತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿವರಾಂ ಅವರು ಇಂದು ನಿಧನ ಹೊಂದಿದ್ದಾರೆ. ಈ ದುಃಖದ ವಿಚಾರವನ್ನು ಶಿವರಾಂ ಅವರ ಪುತ್ರ ಲಕ್ಷ್ಮೀಶ್‌ ಅವರು ದೃಢಪಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಕಾರು ಅಪಘಾತವಾಗಿದ್ದರಿಂದ  ಶಿವರಾಂ ಅವರ ಮಿದುಳಿಗೆ ಸಾಕಷ್ಟು ಹಾನಿಯಾಗುತ್ತು. ಅನಂತರ ಚೇತರಿಸಿಕೊಂಡಿದ್ದ ಶಿವರಾಂ ಅವರು, ನಾಲ್ಕು ದಿನದ ಹಿಂದೆ ಮನೆಯಲ್ಲಿ ಕಾಲುಜಾರಿ ಬಿದ್ದಿದ್ದರು.  ಇದ್ರಿಂದಾಗಿ ಶಿವರಾಂ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ಆಸ್ಪತ್ರೆ ವೈದ್ಯರು ಸಾಕಷ್ಟು ಶ್ರಮ ಪಟ್ಟರೂ ಶಿವರಾಂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ.

ಕನ್ನಡ ಚಿತ್ರರಂಗಕ್ಕೆ ಶಿವರಾಂ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಹಲವಾರು ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ಕಿರುತೆರೆಯಲ್ಲೂ ಅಭಿನಯಿಸಿದ್ದಾರೆ. ಬಣ್ಣದ ಲೋಕದಲ್ಲಿ ಅವರ ಅನುಭವ ೬ ದಶಕಗಳಿಗೂ ಹೆಚ್ಚು.  ಕನ್ನಡದ ನೂರಾರು ಚಿತ್ರಗಳಲ್ಲಿ ಪೋಷಕ ನಟರಾಗಿ ನಟಿಸಿರುವ ಶಿವರಾಂ ಇತ್ತೀಚಿನವರೆಗೂ ಬಣ್ಣ ಹಚ್ಚಿದ್ದರು. ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಿರಿಯ ಕಲಾವಿದರ ಜೊತೆ ನಟಿಸಿದ್ದರು.

83 ವರ್ಷ ವಯಸ್ಸಿನ ಶಿವರಾಂ ಅವರು ನೂರಾರು ಚಿತ್ರಗಳಲ್ಲಿ ನಟಿಸಿದ್ದರು. ರಂಗಭೂಮಿ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ೧೯೬೫ರಲ್ಲಿ ಮೊದಲ ಬಾರಿಗೆ ಚಲನಚಿತ್ರಕ್ಕಾಗಿ ಬಣ್ಣ ಹಚ್ಚಿದ್ದರು. ಶರಪಂಜರ, ನಾಗರಹಾವು, ಚಲಿಸುವ ಮೋಡಗಳು, ಶ್ರಾವಣ ಬಂತು ಹೀಗೆ ಹಲವಾರು ಹಿಟ್‌ ಚಿತ್ರಗಳಲ್ಲಿ ಶಿವರಾಂ ಅವರು ನಟಿಸಿದ್ದರು

  ಶಿವರಾಂ ಅವರ ನಿಧನಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ರಾಜಕಾರಣಿಗಳು, ಚಿತ್ರ ನಟ, ನಟಿಯರು ಕಂಬನಿ ಮಿಡಿದಿದ್ದಾರೆ.
  ತ್ಯಾಗರಾಜನಗರದ ನಿವಾಸದಲ್ಲಿ ಶಿವರಾಂ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ಅದಾದ ನಂತರ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ.
  ಸಿಎಂ ಬಸವರಾಜ ಬೊಮ್ಮಾಯಿ ಶಿವರಾಂ ಅವರ ಅಂತಿಮ ದರ್ಶನ ಪಡೆದರು. ಅನಂತರ ಮಾತನಾಡಿದ ಅವರು, ಪೊಲೀಸ್‌ ಗೌರವದೊಂದಿಗೆ ಶಿವರಾಂ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
Share Post