ಭಾರತದಲ್ಲಿ ಪಾತಾಳಕ್ಕಿಳಿದ ಶುದ್ಧ ನೀರಿನ ಪ್ರಮಾಣ; ನೀರಿನ ಬಿಕ್ಕಟ್ಟಿನ ಬಗ್ಗೆ ಪರಿಸರ ತಜ್ಞರ ಆತಂಕ
ನವದೆಹಲಿ: ಭಾರತದಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಎದುರಾಗಿದೆ. ದೇಶದಲ್ಲಿ ಶುದ್ಧವಾದ ಕುಡಿಯುವ ನೀರಿನ ಬಿಕ್ಕಟ್ಟು ಹೆಚ್ಚಾಗಿದ್ದು, ಈ ಬಗ್ಗೆ ಭಾರತ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ. ವಿಶ್ವದಲ್ಲಿ ಭಾರತದ ಜನಸಂಖ್ಯೆ ಶೇಕಡಾ 16ರಷ್ಟಿದೆ. ಆದ್ರೆ, ವಿಶ್ವದ ಒಟ್ಟಾರೆ ಶುದ್ಧ ಕುಡಿಯುವ ನೀರಿನ ಲಭ್ಯತೆಯನ್ನು ನೋಡಿದರೆ ಅದರಲ್ಲಿ ಭಾರತ ಶೇ.4ರಷ್ಟು ಮಾತ್ರ ಶುದ್ಧ ನೀರು ಹೊಂದಿದೆ ಎಂದು ಪರಿಸರ ತಜ್ಞರು ಹೇಳಿದ್ದಾರೆ.
ವಿಶ್ವ ಜಲ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಇಂಟಿಗ್ರೇಟೆಡ್ ಹೆಲ್ತ್ ಅಂಡ್ ವೆಲ್ಬೀಯಿಂಗ್ ಕೌನ್ಸಿಲ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಮಲ್ ನಾರಾಯಣ್ ಒಮರ್ ಮಾತನಾಡಿ, ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ನೀರಿನ ಬಳಕೆಗೆ ಸುಸ್ಥಿರ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ಕೂಡಾ ಭಾರತಕ್ಕೆ ಅವರು ಸಲಹೆ ನೀಡಿದ್ದಾರೆ. ಹವಾಮಾನ ಬದಲಾವಣೆಯಿಂದಾಗಿ ಪರಿಸರ ಮತ್ತು ಪರಿಸರ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಎದುರಾಗಿದ್ದು, ಇದರಿಂದ ನೀರಿನ ಬಿಕ್ಕಟ್ಟು ಎದುರಾಗಿದೆ. ಭೂಮಿ ಮೇಲೆ 220 ಕೋಟಿಗಿಂತ ಹೆಚ್ಚು ಜನರು ಸುರಕ್ಷಿತ ನೀರಿನಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.