CrimeNational

ಮದುವೆ ಬಸ್‌ ನಾಗಾರ್ಜುನ ಸಾಗರ ಕಾಲುವೆಗೆ ಪಲ್ಟಿ; 7 ಮಂದಿ ದುರ್ಮರಣ

ಪ್ರಕಾಶಂ; ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ದರ್ಶಿ ಬಳಿ ಮದುವೆ ಬಸ್ ನಾಗಾರ್ಜುನ ಸಾಗರ ಕಾಲುವೆಗೆ ಉರುಳಿ ಬಿದ್ದಿದ್ದು, ಭೀಕರ ಅಪಘಾತ ಸಂಭವಿಸಿದೆ. ದುರಂತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಆರು ವರ್ಷದ ಮಗು ಕೂಡಾ ಸೇರಿದೆ. 12 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಂಧ್ರ ಪ್ರದೇಶದ ಸರ್ಕಾರಿ ಬಸ್‌ ಇದಾಗಿದೆ. ಗುತ್ತಿಗೆ ಆಧಾರದ ಮೇಲೆ ಮದುವೆಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ ಕಳೆದ ಮಧ್ಯ ರಾತ್ರಿ ಕಾಲುವೆಗೆ ಉರುಳಿಬಿದ್ದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆಯ ಸಮಯದಲ್ಲಿ ಬಸ್‌ನಲ್ಲಿ 40 ಮಂದಿ ಪ್ರಯಾಣಿಸುತ್ತಿದ್ದರು. ಮದುವೆಯ ಆರತಕ್ಷತೆಗಾಗಿ ಕಾಕಿನಾಡಕ್ಕೆ ಹೋಗುತ್ತಿದ್ದಾಗ ಪ್ರಕಾಶಂ ಜಿಲ್ಲೆಯಲ್ಲಿ ಅಪಘಾತ ನಡೆದಿದೆ.

ಬಸ್ ಹೊರಟ ಸ್ವಲ್ಪ ಸಮಯದಲ್ಲೇ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮೃತರಲ್ಲಿ ಅಬ್ದುಲ್ ಅಜೀಜ್, ಅಬ್ದುಲ್ ಹನಿ, ಶೇಖ್ ರಮೀಜ್, ನೂರ್ ಜಹಾನ್, ಜಾನಿ ಬೇಗಂ, ಸಬೀನಾ ಮತ್ತು ಆರು ವರ್ಷದ ಹಿನಾ ಸೇರಿದ್ದಾರೆ. ಗಾಯಾಳುಗಳನ್ನು ಒಂಗೋಲು ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ಕಾರಣವನ್ನು ತನಿಖೆ ನಡೆಸುತ್ತಿದ್ದೇವೆ ಎಂದು ದರ್ಶಿ ಪೊಲೀಸರು ಬಿಬಿಸಿಗೆ ತಿಳಿಸಿದ್ದಾರೆ.

RTC ಮದುವೆ ಬಸ್ ಅಪಘಾತದ ಬಗ್ಗೆ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದಾರೆ. ಪೊಡಿಲಿಯಿಂದ ಕಾಕಿನಾಡಕ್ಕೆ ವಧು-ವರರೊಂದಿಗೆ ತೆರಳುತ್ತಿದ್ದ ಬಸ್ಸೊಂದು ಎದುರಿನಿಂದ ಬಂದ ವಾಹನದಿಂದ ಪಲ್ಟಿಯಾಗಿ ಸಮೀಪದ ಎನ್‌ಸಿಪಿ ಕಾಲುವೆಗೆ ಬಿದ್ದು ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ಪೊಲೀಸ್ ಸಿಬ್ಬಂದಿ ಮತ್ತು ಇತರ ಅಧಿಕಾರಿಗಳು ಅಪಘಾತದ ಸ್ಥಳಕ್ಕೆ ತೆರಳಿ ಪರಿಹಾರ ಕ್ರಮಗಳನ್ನು ಕೈಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು. ಘಟನೆಯಲ್ಲಿ ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.

Share Post