ವಿದೇಶಗಳಲ್ಲಿ ಕೊರೊನಾ ನಾಲ್ಕನೇ ಅಲೆ: ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸೂಚನೆ
ದೆಹಲಿ: ಭಾರತದಲ್ಲಿ ಕೊರೊನಾ ಪ್ರಕರಣಗಳು ತೀರಾ ಕಡಿಮೆಯಾಗಿವೆ ಎಂದು ನಿಟ್ಟುಸಿರು ಬಿಡುವ ಸಮಯದಲ್ಲಿ ಮತ್ತೊಂದು ಆಘಾತಕಾರಿ ಸುದ್ದಿಯನ್ನು ಕೇಂದ್ರ ನೀಡಿದೆ. ಮಹಾಮಾರಿ ಕರೋನವೈರಸ್ ಹೊಸ ರೂಪಾಂತರಿಯಾಗಿ ವಿಶ್ವಾದ್ಯಂತ ಮತ್ತೆ ವಿಜೃಂಭಿಸುತ್ತಿದೆ. ಕರೋನಾ ಓಮಿಕ್ರಾನ್ ರೂಪಾಂತರದೊಂದಿಗೆ ಕೊನೆಗೊಳ್ಳುತ್ತಿದ್ದಂತೆ, ಮತ್ತೊಂದು ಹೊಸ ರೂಪಾಂತರವು ಪ್ರಪಂಚದಾದ್ಯಂತ ಸದ್ದು ಮಾಡುತ್ತಿದೆ. ಚೀನಾದಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಹೀಗಾಗಿ ಚೀನಾದ ಹಲವಾರು ನಗರಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದಾರೆ.
ಹೀಗಾಗಿ ದೇಶದಲ್ಲಿ ಕೊರೊನಾ ನಾಲ್ಕನೇ ಅಲೆಯ ಭೀತಿ ಎದುರಾಗುವ ಲಕ್ಷಣಗಳಿವೆ. ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನಿಸಿದರೆ, ಅದೇ ಪರಿಸ್ಥಿತಿ ಉದ್ಭವಿಸಬಹುದು ಎಂಬ ಆತಂಕವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೈ ಅಲರ್ಟ್ ಘೋಷಣೆ ಮಾಡಿದೆ. ಶಾಲೆಗಳ ಪುನರಾರಂಭ, ಕಚೇರಿಗಳಿಗೆ ಸ್ಥಳಾಂತರ ಮತ್ತು ಮಾಸ್ಕ್ ನಿಯಮಗಳನ್ನು ಸಡಿಲಗೊಳಿಸಿರುವುದು ಸಹ ಕೊರೊನಾ ಹೆಚ್ಚಳದ ಒಂದು ಅಂಶವಾಗಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ಈ ಮೂರು ವಿಚಾರಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಕೇಂದ್ರ ಸಚಿವ ಮಾಂಡವಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೊರೊನಾ ಪ್ರಕರಣಗಳ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೊರೊನಾ ನಾಲ್ಕನೇ ಅಲೆಯ ಭೀತಿಯನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಮೊದಲೇ ಎಚ್ಚರಿಕೆ ನೀಡಲಾಗುತ್ತಿದೆ.
ಆಗ್ನೇಯ ಏಷ್ಯಾ, ಚೀನಾ ಮತ್ತು ಯುರೋಪ್ನಲ್ಲಿ ಮತ್ತೊಮ್ಮೆ ಕೊರೋನಾ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದ್ದು, ದೇಶಾದ್ಯಂತ ಕೋವಿಡ್ -19 ಕಟ್ಟುನಿಟ್ಟಿನ ಕ್ರಮ ತೀವ್ರಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮಾರ್ಚ್ 27 ರಿಂದ ಅಂತರರಾಷ್ಟ್ರೀಯ ವಿಮಾನಯಾನ ಪುನರಾರಂಭದ ನಿರ್ಧಾರವನ್ನು ಪರಿಶೀಲನೆ ಮಾಡಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ಪುನರಾರಂಭಿಸುವ ಆದೇಶಗಳನ್ನು ರದ್ದುಗೊಳಿಸುವ ಬಗ್ಗೆ ಯಾವುದೇ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ರು.