ಆಪರೇಷನ್ ಗಂಗಾ: ದೆಹಲಿ ಬಂದು ತಲುಪಿದ ಆರನೇ ವಿಮಾನ-240ಭಾರತೀಯರು ಸ್ವದೇಶಕ್ಕೆ
ದೆಹಲಿ: ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಯುದ್ಧದ ಅಂತ್ಯ ಯಾವಾಗ ಎಂದು ತಿಳಿಯದೆ ಅಲ್ಲಿ ನೆಲೆಸಿರುವ ಸ್ಥಳೀಯರು ಹಾಗೂ ವಿದೇಶಿಗರು ಆತಂಕದಲ್ಲಿದ್ದಾರೆ. ಉಕ್ರೇನ್‌ನಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಭಾರತ ಸರ್ಕಾರ ಕ್ರಮ ಕೈಗೊಂಡಿರುವುದು ಎಲ್ಲರಿಗೂ ತಿಳಿದೇ ಇದೆ. ಇದರ ಅಂಗವಾಗಿ ನಡೆಸಲಾದ ಆಪರೇಷನ್ ಗಂಗಾ ಕಾರ್ಯಾಚರಣೆ ಮುಂದುವರಿದಿದೆ. ಸೋಮವಾರ ಮಧ್ಯಾಹ್ನದವರೆಗೆ ಉಕ್ರೇನ್‌ನಿಂದ ಭಾರತೀಯರನ್ನು ಹೊತ್ತು 5 ವಿಮಾನಗಳು ಬಂದಿಳಿದಿವೆ.
ಸೋಮವಾರ ಸಂಜೆ ದೆಹಲಿಗೆ ಬಂದಿಳಿದ ವಿಮಾನದಲ್ಲಿ 240 ಭಾರತೀಯ ಪ್ರಯಾಣಿಕರಿದ್ದರು. ಇದುವರೆಗೆ ಉಕ್ರೇನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಆಗಮಿಸಿದವರ ಸಂಖ್ಯೆ 1,396ಕ್ಕೆ ತಲುಪಿದೆ. MBBS ವಿದ್ಯಾರ್ಥಿಗಳು ಉಕ್ರೇನ್‌ನಿಂದ ರೊಮೇನಿಯನ್ ಗಡಿಗೆ ಪ್ರವೇಶಿಸಿ ಅಲ್ಲಿಂದ ಭಾರತಕ್ಕೆ ಬಂದಿದ್ದಾರೆ.
ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಚುರುಕುಗೊಳಿಸಿದೆ. ಈಗಾಗಲೇ ಆಪರೇಷನ್ ಗಂಗಾ ಹೆಸರಿನಲ್ಲಿ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿದೆ. ಮೋದಿ ಸರ್ಕಾರ ಇತ್ತೀಚೆಗೆ ನಾಲ್ವರು ಕೇಂದ್ರ ಸಚಿವರನ್ನು ಸಹ ಉಕ್ರೇನ್ ನೆರೆ ರಾಷ್ಟ್ರಗಳಿಗೆ ಕಳಿಸಿದ್ದಾರೆ. ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು, ವಿಕೆ ಸಿಂಗ್ ರನ್ನು ಭಾರತೀಯ ನಾಗರಿಕರ ಸ್ಥಳಾಂತರಿಸುವ ಕಾರ್ಯಾಚರಣೆಯ ಮೇಲುಸ್ತುವಾರಿ ನಿರ್ವಹಿಸುತ್ತಾರೆ. ಈ ನಿರ್ಧಾರದಿಂದ ಉಕ್ರೇನ್‌ನಲ್ಲಿರುವ ಭಾರತೀಯರನ್ನು ವಾಪಸ್ ಕರೆತರುವ ಕಾರ್ಯ ಹೆಚ್ಚು ಸುಲಭವಾಗಲಿದೆ.