CrimeNational

ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂಗೆ ಸಮನ್ಸ್‌..!

ನವದೆಹಲಿ: ಏರ್‌ಸೆಲ್–ಮ್ಯಾಕ್ಸಿಸ್ ಹಗರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿರುವ ದೋಷಾರೋಪಪಟ್ಟಿಯ ಆಧಾರದ ಮೇಲೆ  ದೆಹಲಿ ಕೋರ್ಟ್, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತೀ ಚಿದಂಬರಂಗೆ ಸಮನ್ಸ್‌ ಜಾರಿ ಮಾಡಿದೆ . ಡಿಸೆಂಬರ್ 20ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಚಿದಂಬರಂ ಮತ್ತು ಇತರ ಆರೋಪಿಗಳು ಭಾಗಿಯಾಗಿದ್ದಾರೆಂಬ ಆರೋಪವಿದೆ.  ಇದಕ್ಕೆ ಕೋರ್ಟ್‌ ಬಳಿ ಸಮರ್ಪಕ ಸಾಕ್ಷ್ಯಗಳಿವೆ ಎಂದು ದೆಹಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅಭಿಪ್ರಾಯಪಟ್ಟಿದ್ದಾರೆ.

ತನಿಖೆಗೆ ಪೂರಕವಾಗಿ ಅಗತ್ಯ ಮಾಹಿತಿ ಒದಗಿಸಲು ಕೋರಿ ಬ್ರಿಟನ್‌ ಮತ್ತು ಸಿಂಗಪುರ ಕೋರ್ಟ್‌ಗೆ ಪತ್ರ ಬರೆಯಲಾಗಿದೆ. ಈ ವಿಷಯದಲ್ಲಿ ಭಾಗಶಃ ಪ್ರಗತಿ ಕಾಣಿಸಿಕೊಂಡಿದೆ ಎಂದು ಇದಕ್ಕೂ ಮುನ್ನ ತನಿಖಾ ಸಂಸ್ಥೆಗಳ ಅಧಿಕಾರಿಗಳು ಕೋರ್ಟ್‌ಗೆ ತಿಳಿಸಿದರು. ವಿಚಾರಣೆಯ ವೇಳೆ ಜಾರಿ ನಿರ್ದೇಶನಾಲಯದ ವಿಶೇಷ ಅಭಿಯೋಜಕ ಎನ್‌.ಕೆ.ಮಟ್ಟಾ, ಸಿಬಿಐ ಪರ ವಕೀಲ ನೂರ್‌ ರಾಮಪಾಲ್‌ ಹಾಜರಿದ್ದರು.

3500 ಕೋಟಿ ರೂಪಾಯಿ ಮೊತ್ತದ ಹಗರಣ ಇದಾಗಿದ್ದು, ಚಿದಂಬರಂ ಅವರನ್ನು ಮೊದಲನೇ ಆರೋಪಿ ಎಂದು ಹೆಸರಿಸಲಾಗಿದೆ. ಪ್ರಕರಣವನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದು, ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿವೆ.

Share Post