ಮಠಕ್ಕೆ ಕೊಟ್ಟ ಕಾಣಿಕೆ ಹಿಂಪಡೆಯುವುದಿಲ್ಲ; ಸಚಿವ ಮುರುಗೇಶ್ ನಿರಾಣಿ
ಮೈಸೂರು: ಕೂಡಲಸಂಗಮ ಮಠದ ಶ್ರೀಗಳು ಮಠಕ್ಕೆ ನೀಡಿರುವ ದಾನದ ಕಾಣಿಕೆಗಳನ್ನು ನಾನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ನಾನು ಪೀಠಕ್ಕೆ ಕಾಣಿಕೆಗಳನ್ನು ಕೊಟ್ಟಿದ್ದೇನೆ. ಯಾವುದೇ ವ್ಯಕ್ತಿಗೆ ಕೊಟ್ಟಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಸಚಿವರು, ನಾನು ಒಬ್ಬ ವ್ಯಕ್ತಿಗೆ ಅಂತ ಕಾಣಿಕೆ ಕೊಟ್ಟಿಲ್ಲ. ಜೊತೆಗೆ ಕೊಟ್ಟ ವ್ಯಕ್ತಿ ಕೂಡಾ ಶಾಶ್ವತವಲ್ಲ. ಮಠ ಮಾತ್ರ ಶಾಶ್ವತವಾಗಿರುತ್ತದೆ. ಕೂಡಲಸಂಗಮ ಮಠದ ಶ್ರೀಗಳು ಮಠಕ್ಕೆ ನೀಡಿರುವ ದಾನದ ಕಾಣಿಕೆಗಳನ್ನು ಹಿಂತಿರುಗಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಶ್ರೀಗಳು ಯಾಕೆ ಈ ರೀತಿಯ ಹೇಳಿಕೆ ಕೊಟ್ಟರೋ ಅರ್ಥವಾಗುತ್ತಿಲ್ಲ ಎಂದರು.
ನಮ್ಮಂಥ ನೂರಾರು ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ನಾನು ಮಠದ ಮೇಲಿನ ಗೌರವದಿಂದ ಕಾಣಿಕೆಗಳನ್ನು ಭಕ್ತಿ ರೂಪದಲ್ಲಿ ಕೊಟ್ಟಿದ್ದೇನೆ. ಇದು ನನಗೆ ನಮ್ಮ ಹಿರಿಯರು ಹೇಳಿಕೊಟ್ಟಿದ್ದು. ಭಕ್ತಿಭಾವದಿಂದ ಕೊಟ್ಟ ಕಾಣಿಕೆಯನ್ನು ಪ್ರಚಾರಕ್ಕಾಗಿ ಪಡೆಯುವ ವ್ಯಕ್ತಿ ನಾನಲ್ಲ ಎಂದು ನಿರಾಣಿ ಸ್ಪಷ್ಟಪಡಿಸಿದರು. ನಮ್ಮ ಇಡೀ ಕುಟುಂಬವೇ ಸಮಾಜದಲ್ಲಿರುವ ಎಲ್ಲ ಮಠಗಳನ್ನು ಮಠಾೀಶರನ್ನು ಅತ್ಯಂತ ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದ್ದೇವೆ. ಎಂಥ ಸಂದರ್ಭದಲ್ಲೂ ಕೂಡ ಯಾರನ್ನು ಅಗೌರವದಿಂದ ಕಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಕೂಡಲಸಂಗಮ ಮಠದ ಶ್ರೀಗಳಾದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳ ಬಗ್ಗೆ ನನಗೆ ಮೊದಲಿನಿಂದಲೂ ಅಪಾರವಾದ ಗೌರವವಿದೆ. ಶ್ರೀಗಳು ನಮ್ಮ ಸಮುದಾಯದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತಿದ್ದೇವೆ. ಅವರಿಗೆ ನನ್ನ ಬಗ್ಗೆ ತಪ್ಪು ಸಂದೇಶ ಮೂಡಿದೆ ಎಂದು ಮರುಗೇಶ್ ನಿರಾಣಿ ಅಸಮಾಧಾನ ವ್ಯಕ್ತಪಡಿಸಿದರು.