Nidagal Hills; ಬೆಂಕಿಯುಂಡೆಯಾಯ್ತು ನಿಡಗಲ್ ಬೆಟ್ಟ; ಇದು ಭಸ್ಮಾಸುರರ ಕೆಲಸ!
ತುಮಕೂರು; ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಬರುವ ನಿಡಗಟ್ಟು ಬೆಟ್ಟ ಐತಿಹಾಸಿಕ ಕುರುಹು… ಪಾಳೆಗಾರರು ಆಳಿದ ಈ ನಿಡಗಲ್ಲು ಕೋಟೆ ಪ್ರವಾಸಿಯಾಣವೂ ಹೌದು.. ಆದ್ರೆ ನಮ್ಮ ಪ್ರವಾಸೋದ್ಯಮ ಇಲಾಖೆ ಈ ಮನಮೋಹಕ ಬೆಟ್ಟದ ಬಗ್ಗೆ ಗಮನವನ್ನೇ ಕೊಟ್ಟಿಲ್ಲ… ಬೆಂಗಳೂರಿಗೆ ಸಮೀಪದಲ್ಲೇ ಇರುವ ಈ ಬೆಟ್ಟವನ್ನು ಪ್ರವಾಸಿತಾಣವನ್ನಾಗಿ ಬೆಳೆಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದೇ ಹೇಳಬಹುದು… ಚಾರಣ ಮಾಡುವವರಿಗೆ, ಇತಿಹಾಸ ವಿದ್ಯಾರ್ಥಿಗಳು ಸಾಕಷ್ಟು ಕತೆಗಳನ್ನು ಹೇಳುವ ಈ ಬೆಟ್ಟ ನಿಧಿ ಹುಡುಕುವವರಿಗೆ ಆಹುತಿಯಾಗುತ್ತಿದೆ.. ದಶಕಗಳ ಹಿಂದೆ ಈ ಬೆಟ್ಟದಲ್ಲಿ ಮರಗಳು ಹೇರಳವಾಗಿದ್ದವು.. ಆದ್ರೆ ಇದನ್ನು ಮರಗಳ್ಳರು ಕಡಿದು ಬರಡು ಮಾಡಿಬಿಟ್ಟಿದ್ದಾರೆ.. ಇನ್ನು ಇರೋದು ಬರೀ ಹುಲ್ಲುಗಾವಲು ಮಾತ್ರ.. ಅದನ್ನೂ ಕೂಡಾ ಬಿಡುತ್ತಿಲ್ಲ.. ಇನ್ನು ಬೇಸಿಗೆ ಶುರುವಾಯ್ತು ಅಂದ್ರೆ ಸಾಕು ಹುಲ್ಲುಗಾವಲಿಗೆ ಬೆಂಕಿ ಇಡುವ ಕೆಟ್ಟ ಚಾಳಿ ಮುಂದುವರೆದಿದೆ..
ಇದನ್ನೂ ಓದಿ; Guava Leaves; ಸೀಬೆ ಎಲೆಗಳ ಟೀ ಕುಡಿದರೆ ಸಕ್ಕರೆ ಮಟ್ಟ ನಿಯಂತ್ರಣ!
ನಿಡಗಲ್ಲು ಬೆಟ್ಟಕ್ಕೆ ಬೆಂಕಿ ಇಟ್ಟ ದುಷ್ಟರು..!;
ನಿಡಗಲ್ಲು ಬೆಟ್ಟಕ್ಕೆ ಬೆಂಕಿ ಇಟ್ಟ ದುಷ್ಟರು..!; ಕಳೆದ ಸಂಜೆ ಯಾರೋ ದುಷ್ಟರು ನಿಡಗಲ್ಲು ಬೆಟ್ಟಕ್ಕೆ ಬೆಂಕಿ ಇಟ್ಟಿದ್ದಾರೆ. ಇದರಿಂದಾಗಿ ಬೆಟ್ಟದ ಬಹುತೇಕ ಭಾಗದಲ್ಲಿದ್ದ ಮರಗಿಡಗಳು, ಹುಲ್ಲುಗಾವಲು ಸುಟ್ಟು ಬೂದಿಯಾಗಿವೆ. ಹೀಗೆ ಆದಾಗಲೆಲ್ಲಾ ಅರಣ್ಯ ಸಿಬ್ಬಂದಿ ಪ್ರಾಣ ಪಣಕ್ಕಿಡಬೇಕಾದ ಪರಿಸ್ಥಿತಿ.. ಕಳೆದ ರಾತ್ರಿಯಿಂದ ಅರಣ್ಯ ಸಿಬ್ಬಂದಿ ನಿರಂತರವಾಗಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ರಣಬಿಸಿಲಿನಲ್ಲೂ ಅವರು ಬೆಟ್ಟದ ಸೌಂದರ್ಯ ಕಾಪಾಡೋದಕ್ಕೆ ಪ್ರಯತ್ನಿಸುತ್ತಿದ್ದಾರೆ..
ಇದನ್ನೂ ಓದಿ; 6 Habits of Successful People; ಯಶಸ್ವಿ ವ್ಯಕ್ತಿಗಳ ಆರು ಅಭ್ಯಾಸಗಳು; ಇವೇ ಯಶಸ್ಸಿನ ಸೂತ್ರಗಳು!
ಪಾವಗಡದ ನಿಡಗಲ್ ಕೋಟೆಯ ಇತಿಹಾಸ;
ಪಾವಗಡದ ನಿಡಗಲ್ ಕೋಟೆಯ ಇತಿಹಾಸ; ನಿಡಗಲ್ ದುರ್ಗ ಐತಿಹಾಸಿಕವಾಗಿಯೂ ತುಮಕೂರು ಜಿಲ್ಲೆಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ 322 ಅಡಿ ಎತ್ತರವಿದ್ದು, ಅತ್ಯಂತ ಕಡಿದಾಗಿದ್ದು ಒಂದು ಅಖಂಡ ಶಿಲೆ ಹೊಂದಿದೆ. ಈ ಬೆಟ್ಟದಲ್ಲಿ ಮರಗಳ ಹನನವಾಗಿದ್ದರೂ, ಅಸಂಖ್ಯಾತ ನವಿಲುಗಳು ಇಲ್ಲಿ ಕಾಣಸಿಗುತ್ತದೆ. ಹಲವು ಪ್ರಾಣಿ, ಪಕ್ಷಿಗಳೂ ಇವೆ.
ಈ ನಿಡಗಲ್ ಬೆಟ್ಟವು ಭೀಮಾಕೃತಿಯ ಏಕಶಿಲೆಯಾಗಿರುವುದರಿಂದ ನಿಡಗಲ್ಲು ಎಂಬ ಹೆಸರು ಬಂದಿದ್ದಾಗಿ ಇತಿಹಾಸ ಹೇಳುತ್ತೆ. ಇಂತಹ ಅಖಂಡ ಕೋಟೆ ನಿರ್ಮಿಸಿದ ಕೀರ್ತಿ ಅಲ್ಲಿ ಮೊದಲು ಆಳ್ವಿಕೆ ಮಾಡಿದ ನೊಳಂಬ, ಪಲ್ಲವರಿಗೆ ಸಲ್ಲುತ್ತದೆ. ಅವರಿಂದ ನಿರ್ಮಿತವಾದ ಕೋಟೆ ಕಾಲಕಾಲಕ್ಕೆ ವಿಸ್ತಾರವಾಗಿ ವಿಜಯನಗರದ ಕಾಲದಲ್ಲಿ ವಜ್ರಕಾಯದಂತಹ ಕೋಟೆಯಾಗಿ ಮಾರ್ಪಟ್ಟಿತ್ತು. ಇಂತಹ ಕೋಟೆಯೊಳಗೆ ಇಂದಿಗೂ ನಾವು ಅನೇಕ ಅವಶೇಷಗಳನ್ನು ನೋಡಬಹುದು.
ಇದನ್ನೂ ಓದಿ; Meat Rice; ಇದು ಬರೀ ಅಕ್ಕಿ ಅಲ್ಲ.. ಮಾಂಸದ ಅಕ್ಕಿ..!
ನಿಡಗಲ್ ಹಿಂದೆ ಒಂದು ಪಾಳೆಯ ಪಟ್ಟವಾಗಿತ್ತು (ಪಾಳೆಗಾರರ ಆಳ್ವಿಕೆ). ನಿಡಗಲ್ಲಿಗೆ ರಕ್ಷಣೆಯಾಗಿ ಹಲವು ಸುತ್ತಿನ ಕೋಟೆಗಳು ಹಾಗೂ ಸಾಲು ಸಾಲು ಕೋಟೆಯ ಗೋಡೆಗಳಿವೆ. ಈ ಕೋಟೆಯ ಬಾಗಿಲುಗಳಿಗೆ ಮಾತನೂರು ಬಾಗಿಲು, ಸಿಂಗಾರದ ಬಾಗಿಲು, ಸಿಂಹಲಯ್ಯನ ಬಾಗಿಲು, ದಿಡ್ಡಿ ಬಾಗಿಲು ಎಂಬ ಹೆಸರಿನಿಂದ ಕರೆಯುತ್ತಿದ್ದರು. ನೊಳಂಬರು, ಚೋಳರು ಹಾಗೂ ಚಾಲುಕ್ಯರ ಪ್ರತಿನಿಧಿಗಳು ಹಾಗೂ ಸಾಮಂತರ ವಶದಲ್ಲಿದ್ದ ದುರ್ಗವನ್ನು ಹೊಯ್ಸಳರ ದೊರೆ ಇಮ್ಮಡಿ ಬಲ್ಲಾಳ ತನ್ನ ಕೈವಶ ಮಾಡಿಕೊಂಡ. ವಿಜಯನಗರದ ಅರಸರ ಕಾಲದಲ್ಲಿ ತಿಪ್ಪರಾಜನ ವಂಶಸ್ಥರು ಪಾಳೆಯಗಾರರಾಗಿ ಆಳಿದರು. ನಂತರ 1761 ರಲ್ಲಿ ಇದು ಹೈದಾರಾಲಿಯ ವಶವಾಯಿತು ಎನ್ನುತ್ತದೆ ಇತಿಹಾಸ. ಈ ದುರ್ಗವನ್ನು ಅಷ್ಟ ಗಣಪತಿ, ಅಷ್ಟ ದುರ್ಗೆಯರು ಹಾಗೂ ಅಷ್ಟ ಭೈರವರು ರಕ್ಷಿಸುತ್ತಿದ್ದರು ಎಂದು ಅವರ ನಂಬಿಕೆಗಳನ್ನು ಮತ್ತು ಅವರ ಆಚರಣೆಗಳನ್ನು ಶಾಸನಗಳಲ್ಲಿ ಕೆತ್ತಿಸಿದ್ದಾರೆ.
ಇಲ್ಲಿರುವ ರಾಮತೀರ್ಥ ಎಂಬ ಕೊಳದಲ್ಲಿ ಭಕ್ತರು ಮಿಂದು ದೇವರ ದರ್ಶನ ಮಾಡುತ್ತಾರೆ. ಶ್ರೀರಾಮನು ವನವಾಸ ಕಾಲದಲ್ಲಿ ಇಲ್ಲಿಗೆ ಬಂದಿದ್ದನೆಂದು ಹೇಳಲಾಗುತ್ತದೆ. ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಕಷ್ಟಗಳು ಮತ್ತು ಚರ್ಮದ ಕಾಯಿಲೆಗಳು ನಾಶವಾಗುತ್ತವೆ ಎಂಬ ನಂಬಿಕೆ ಮತ್ತು ಪ್ರತೀತಿ ಇದೆ.
ಜೈನ ಧರ್ಮಕ್ಕೂ ಇಲ್ಲಿ ಪ್ರಾಶಸ್ತ್ಯ ನೀಡಲಾಗಿದೆ;
ಜೈನ ಧರ್ಮಕ್ಕೂ ಇಲ್ಲಿ ಪ್ರಾಶಸ್ತ್ಯ ನೀಡಲಾಗಿದೆ; ಇಲ್ಲಿ ಮುಖ್ಯವಾದ ಅಂಶವೇನೆಂದರೆ ನಿಡಗಲ್ ಜೈನರ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು ಜೈನ ಧರ್ಮಕ್ಕೆ ಪ್ರಾಶಸ್ತ್ಯವನ್ನು ನೀಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ
ನಿಡಗಲ್ಲಿನಲ್ಲಿ ಪ್ರಾಚೀನ ಜೈನ ಬಸದಿಯೊಂದಿದೆ. ಇದು ಸಹ ಶಿಥಿಲಾವಸ್ಥೆಯಲ್ಲಿತ್ತು, ಐದು ವರ್ಷಗಳ ಹಿಂದೆ ಇದನ್ನು ಪುನರ್ನವೀಕರಣ ಮಾಡಲಾಗಿದೆ, ನೋಡಲು ಸುಂದರವಾಗಿದೆ. ಜೈನ ಧರ್ಮಕ್ಕೆ ನಿಡಗಲ್ ಅರಸರು ಹೆಚ್ಚಿನ ಪ್ರೋತ್ಸಾಹ ನೀಡಿದ್ದರು ಎಂದು ಇತಿಹಾಸ ಹೇಳುತ್ತದೆ.
ನಿಡಗಲ್ ಅರಸರು ಅನೇಕ ಧರ್ಮಗಳಿಗೆ ಪ್ರೋತ್ಸಾಹ ನೀಡಿದ್ದರು ಎನ್ನುವುದಕ್ಕೆ ಇದೊಂದು ಉತ್ತಮ ಸಾಕ್ಷಿಯಾಗಿದೆ. ಇದನ್ನು ಹೊರತುಪಡಿಸಿ ನೋಡುವುದಾದರೆ ಪ್ರಮುಖವಾಗಿ ಶೈವ ಹಾಗೂ ಬ್ರಾಹ್ಮಣ ಮತ್ತು ಜೈನ ಸಂಪ್ರದಾಯಗಳು ಅತಿ ಹೆಚ್ಚು ಪ್ರಭಾವ ಹೊಂದಿದ್ದವು ಎಂಬುದಕ್ಕೆ ಅನೇಕ ಪುರಾವೆಗಳು ದೊರೆತಿವೆ. ಶಿವಗಂಗೆಯಿಂದ ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಸುರಂಗ ಮಾರ್ಗ ವಿರುವಂತೆ ಈ ಐತಿಹಾಸಿಕ ನಿಡಗಲ್ ಕೋಟಯಿಂದ ಚಿತ್ರದುರ್ಗಕ್ಕೆ ಸುರಂಗ ಮಾರ್ಗವಿದೆಯೆಂದು ಹೇಳಲಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ಅಲ್ಲೊಂದು ಸುರಂಗ ಮಾರ್ಗವೂ ಇದೆ.
ನಿಡಗಲ್ ಬೆಟ್ಟವನ್ನು ಯಾಕೆ ಉಳಿಸಿ, ಬೆಳೆಸಬೇಕು..?;
ನಿಡಗಲ್ ಬೆಟ್ಟವನ್ನು ಯಾಕೆ ಉಳಿಸಿ, ಬೆಳೆಸಬೇಕು..?; ಪಾವಗಡದಿಂದ ನಿಡಗಲ್ ಬೆಟ್ಟಕ್ಕೆ ರಸ್ತೆ ಇದೆ. ಅರಣ್ಯ ಇಲಾಖೆಯ ವಸತಿ ಗೃಹವಿದೆ. ಸುಂದರ ಗುಡ್ಡ ಪ್ರದೇಶ ಹಾಗೂ ಅರಣ್ಯವನ್ನು ಹೊಂದಿರುವ ಇಲ್ಲಿ ಕೆಲವೊಂದು ವನ್ಯಜೀವಿಗಳನ್ನೂ ನೋಡಬಹುದು. ನವಿಲುಗಳು ಹೇರಳವಾಗಿವೆ. ದೇವಾಲಯಗಳು ಕಾಲದ ದಾಳಿಗೆ ಸಿಲುಕಿ ಕೆಲವು ಹಾಳಾಗಿದ್ದರೆ, ಮತ್ತೆ ಕೆಲವು ಸ್ಮಾರಕಗಳು ನಿಧಿಗಳ್ಳರ ದುರಾಸೆಗೆ ಸಿಕ್ಕಿ ಬುಡಮೇಲೂ ಆಗಿವೆ. ಇಷ್ಟೆಲ್ಲಾ ಇತಿಹಾಸ ಇರುವುದರಿಂದಲೇ ಏನೋ ನಿಡಗಲ್ ಬೆಟ್ಟದಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದೆ. ಅದಕ್ಕೆ ಸಾಕ್ಷಿಯೆಂಬಂತೆ ಅಲ್ಲಲ್ಲಿ ವೀರಗಲ್ಲುಗಳು, ಶಾಸನಗಳ ಬಳಿ ತೋಡಿರುವ ಹಳ್ಳಗಳು ಕಾಣುತ್ತವೆ. ನಿಧಿಯ ಆಸೆಗಾಗಿ ನಿಧಿ ಚೋರರು ಅಲ್ಲಿನ ಪ್ರಾಚೀನ ವಸ್ತುಗಳನ್ನು ಭಗ್ನಗೊಳಿಸಿದ್ದಾರೆ. ಇದನ್ನು ಸಂಬಂಧ ಪಟ್ಟವರು ತಡೆಯ ಬೇಕು ಇಲ್ಲವಾದಲ್ಲಿ ಮತ್ತಷ್ಟು ಹಾಳುಮಾಡಿ ಇತಿಹಾಸವನ್ನೆ ಇಲ್ಲದಂತೆ ಮಾಡುವರು.