ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್ ವಿಚಾರ: ಯೂಟರ್ನ್ ಹೊಡೆದ ಶಾಸಕ ರಾಮದಾಸ್
ಮೈಸೂರು: ಒಂದೇ ಪಕ್ಷದ ಸಂಸದರು ಹಾಗೂ ಶಾಸಕರ ಗುದ್ದಾಟಕ್ಕೆ ಕಾರಣವಾಗಿದ್ದ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ವಿಚಾರ ಈಗ ತಣ್ಣಗಾಗುತ್ತಿದೆ. ಸಂಸದ ಪ್ರತಾಪ ಸಿಂಹ ವಿರುದ್ಧ ಗುಡುಗಿದ್ದ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಈಗ ತಣ್ಣಗಾಗಿದ್ದಾರೆ. ತಮ್ಮ ನಿಲುವಿನಿಂದ ಯೂ ಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನಾನು ಗ್ಯಾಗ್ ಪೈಪ್‌ಲೈನ್ ಯೋಜನೆಯನ್ನು ವಿರೋಧಿಸಿಲ್ಲ. ಪೈಪ್‌ಲೈನ್ ಅಳವಡಿಸುವುದರಿಂದ ಆಗುವ ತೊಂದರೆ ಬಗ್ಗೆ ಚರ್ಚೆ ಮಾಡೋಣ ಎಂದಷ್ಟೇ ಹೇಳಿದ್ದೆ. ಆದ್ರೆ ಅದನ್ನು ವಿವಾದ ಮಾಡಲಾಗಿದೆ. ಈ ಬಗ್ಗೆ ನಾನು ಸಂಸದ ಪ್ರತಾಪ ಸಿಂಹ ಅವರ ಜೊತೆ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಯೋಜನೆ ಮೂಲಕ ಮನೆಮನೆಗೂ ಗ್ಯಾಸ್ ಪೈಪ್‌ಲೈನ್ ಅಳವಡಿಸಲು ತೀರ್ಮಾನಿಸಲಾಗಿದೆ. ಆದ್ರೆ ಇದಕ್ಕೆ ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಹಾಗೂ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಆಕ್ರೋಶ ವ್ಯಕ್ತಪಡಿಸಿದ್ದರು. ಯಾವುದೇ ಕಾರಣಕ್ಕೂ ರಸ್ತೆ ಅಗೆದು ಪೈಪ್‌ಲೈನ್ ಅಳವಡಿಸಲು ಬಿಡುವುದಿಲ್ಲ. ನಮ್ಮ ಕ್ಷೇತ್ರಗಳಲ್ಲಿ ಈಗಾಗಲೇ ರಸ್ತೆ ಕಾಮಗಾರಿಗಳು ನಡೆದಿವೆ. ಈಗ ಗ್ಯಾಸ್‌ಪೈಪ್ ಲೈನ್ ಅಳವಡಿಸಿದರೆ ರಸ್ತೆ ಹಾಳಾಗಲಿದೆ ಎಂದು ಹೇಳಿದ್ದರು.
ಈ ವಿಚಾರವಾಗಿ ಶಾಸಕರು ಹಾಗೂ ಸಂಸದರ ನಡುವೆ ದೊಡ್ಡ ವಾಗ್ವಾದವೇ ನಡೆದಿತ್ತು. ಆದ್ರೆ ಇದೀಗ ಶಾಸಕ ಎಸ್.ಎ.ರಾಮದಾಸ್ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದಾರೆ.