Districts

ಮಂಚನಬೆಲೆ ಜಲಾಶಯಕ್ಕೆ ಕಲುಷಿತ ನೀರು ಸರಬರಾಜು:ಹೆಚ್‌.ಸಿ.ಬಾಲಕೃಷ್ಣ ಆಕ್ರೋಶ

ಮಾಗಡಿ:  ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಮಂಚನಬೆಲೆ ಜಲಾಶಯಕ್ಕೆ ಕಲುಷಿತ ನೀರು ಸೇರುತ್ತಿದ್ದು ಇದು ಎರಡನೇ ಬೈರಮಂಗಲ ಜಲಾಶಯವಾಗುವ ಮುನ್ನಾ ಕೂಡಲೇ ಸರಕಾರ ಕ್ರಮಕೈಗೊಳ್ಳುವಂತೆ ಮಾಜಿ ಶಾಸಕ ಎಚ್.ಸಿ. ಬಾಲಕೃಷ್ಣ ಆಗ್ರಹಿಸಿದ್ರು.  ಮಾಗಡಿ ತಾಲೂಕಿನ ಮಂಚನಬೆಲೆ ಜಲಾಶಯಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಸೇರುತ್ತಿರುವ ಕಲುಷಿತ ನೀರನ್ನು ವೀಕ್ಷಿಸಿ ಮಾತನಾಡಿದ ಅವರು, ಮಾಗಡಿ, ಬಿಡದಿ ಪುರಸಭೆ, ಮತ್ತು ಹಂಚಿಕುಪ್ಪೆ, ಮಾಡಬಾಳ್, ಅಜ್ಜನಹಳ್ಳಿ ಗ್ರಾ.ಪಂ.ಗಳ 33 ಗ್ರಾಮಗಳಿಗೆ ಕುಡಿಯುವ ನೀರುಸರಬರಾಜು ಮಾಡುವ ಮಂಚನಬೆಲೆ ಜಲಾಶಯ ಪ್ರಮುಖವಾಗಿದ್ದು ಇದು ಸಂಪೂರ್ಣ ಕಲುಷಿತವಾಗಿದ್ದು ಇದನ್ನು ತಡೆಗಟ್ಟಲು ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ಮಂಚನಬೆಲೆ ಜಲಾಶಯವನ್ನು ಸರ್ಕಾರ ಪ್ರವಾಸಿ ತಾಣವನ್ನಾಗಿ ಮಾಡುವ ಮುನ್ನ ಜಲಾಶಯದ ನೀರನ್ನು ಶುದ್ದೀಕರಣ ಮಾಡಿ, ಕಲುಷಿತ ನೀರು ತಡೆಗಟ್ಟಲು ಟೆನಾಲ್ ಕೊರೆದು ಬೇರೆಡೆ ಬಿಟ್ಟರೆ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ ಇಲ್ಲದಿದ್ದರೆ ಮಂಚನಬೆಲೆ ಜಲಾಶಯ ಎರಡನೇ ಬೈರಮಂಗಲ ಜಲಾಶಯವಾಗುತ್ತದೆ ಎಂದಿದ್ದಾರೆ.  ಈ ಸಂಬಂಧ ಸಂಸದ ಡಿ.ಕೆ.ಸುರೇಶ್ ಗಮನಕ್ಕೆ ತರಲಾಗಿದೆ. ಜಲಾಶಯದ ನೀರಿನ ಪಿಎಚ್ ಮೌಲ್ಯ  ಯಾವ ಹಂತದಲ್ಲಿದೆ ಎಂದು ಪರೀಕ್ಷಿಸಿ ನಂತರ ಈ ಬಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಬರುವ ಬಜೆಟ್ ನಲ್ಲಿ ಕ್ರಮಕೈಗೊಳ್ಳುವಂತೆ ಮನವಿ ಮಾಡೋಣ ಎಂದು ತಿಳಿಸಿದ್ದಾರೆ.

ನಾನು ಶಾಸಕನಾದ ವೇಳೆ ಮಂಚನಬೆಲೆ ಜಲಾಶಯದ ಪೈಪುಲೈನ್ ಕಾಮಗಾರಿಯನ್ನು ಅಜ್ಜನಹಳ್ಳಿಯಿಂದ ಅಂಕನಹಳ್ಳಿ ಮಾರ್ಗವಾಗಿ ಕೂಟಗಲ್ಲು ವರೆಗೆ ಪೈಪುಲೈನ್ ಅಳವಡಿಸಿದ್ದೆ, ಕಲುಷಿತ ನೀರನ್ನು ತಡೆಯದೆ ಇದ್ದರೆ ಜನರು ರಾಜಕಾರಣಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಲಿದ್ದಾರೆ, ಕಣ್ವ, ಎತ್ತಿನಹೊಳೆ, ಹೇಮಾವತಿ ಜಲಾಶಯ ಮೂಲದಿಂದ ಮಂಚನಬೆಲೆ ಜಲಾಶಯಕ್ಕೆ ನೀರು ಬಂದರೆ ತಿಪ್ಪಗೊಂಡನಹಳ್ಳಿ ಜಲಾಶಯ ನೀರು ನಮಗೆ ಬೇಕಿಲ್ಲ ಈ ಜಲಾಶಯದ ನೀರನ್ನು ಎಷ್ಟೆ ಶುದ್ದೀಕರಣಗೊಳಿಸಿದರು ಕಲುಷಿತ ನೀರು ಬಂದೇ ಬರುತ್ತದೆ, ಯಲಹಂಕ, ನೆಲಮಂಗಲ, ಜಿಂದಾಲು, ಬೆಂಗಳೂರಿನಿಂದ ಬರುವ ಕಲುಷಿತ ನೀರೆಲ್ಲಾ ತಿಪ್ಪಗೊಂಡನಹಳ್ಳಿಗೆ ಸೇರುತ್ತಿದೆ.  ಇದನ್ನು ಸರ್ಕಾರ ತಡೆಗಟ್ಟಬೇಕು ಎಂದು ಆಗ್ರಹಿಸಿದ್ದಾರೆ.

Share Post