ಬಿಜೆಪಿ ಸೇರಿದ ನಂತರ ಮುಲಾಯಂ ಆಶೀರ್ವಾದ ಪಡೆದ ಸೊಸೆ ಅಪರ್ಣಾ ಯಾದವ್
ಲಖನೌ: ಸಮಾಜವಾದಿ ಪಾರ್ಟಿ ನಾಯಕ ಮುಲಾಯಂ ಸಿಂಗ್ ಯಾದವ್ ಅವರು ಕಿರಿಯ ಸೊಸೆ ಅಪರ್ಣಾ ಯಾದವ್ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ತಮ್ಮದೇ ಕುಟುಂಬದ ಪಾರ್ಟಿ ಬಿಟ್ಟು ಬೇರೆ ಪಕ್ಷ ಸೇರಿರುವ ಅವರು, ತಮ್ಮ ಮಾವನ ಆಶೀರ್ವಾದ ಪಡೆದಿದ್ದಾರೆ. ಬಿಜೆಪಿ ಸೇರಿದ ನಂತರ ಮೊದಲ ಬಾರಿಗೆ ಮಾವ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿ ಮಾಡಿರುವ ಅಪರ್ಣಾ ಯಾದವ್ ಅವರು, ಆಶೀರ್ವಾದ ಪಡೆದರು.
ಲಖನೌನಲ್ಲಿರುವ ಮುಲಾಯಂ ಸಿಂಗ್ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಅಪರ್ಣಾ ಯಾದವ್, ತನ್ನ ರಾಜಕೀಯ ಭವಿಷ್ಯ ಚೆನ್ನಾಗಿರಲಿ ಎಂದು ಆಶೀರ್ವದಿಸಿ ಎಂದು ಕೋರಿದ್ದಾರೆ. ಸಮಾಜವಾದಿ ಪಾರ್ಟಿ ತೊರೆದಿದ್ದರ ಬಗ್ಗೆಯೂ ತನ್ನ ಮಾವನಿಗೆ ಸಮಜಾಯಿಷಿ ನೀಡಿದ್ದಾರೆ. ಮುಲಾಯಂ ಕೂಡಾ ಸೊಸೆಗೆ ಆಶೀರ್ವಾದ ಮಾಡಿದ್ದಾರೆ. ಈ ಫೋಟೋವನ್ನು ಅಪರ್ಣಾ ಯಾದವ್ ಅವರೇ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿಯನ್ನು ಅಖಿಲೇಶ್ ಯಾದವ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಯಾದವ್ ನಡುವೆ ಭಿನ್ನಾಭಿಪ್ರಾಯವೇರ್ಪಟ್ಟಿತ್ತು. ಅಂದಿನಿಂದ ಮುಲಾಯಂ ಸಿಂಗ್ ಯಾದವ್ ತೆರೆಮರೆಗೆ ಸರಿದಿದ್ದಾರೆ. ರಾಜಕೀಯದಿಂದ ದೂರವೇ ಉಳಿದಿದ್ದಾರೆ. ವಯಸ್ಸಾದ ಕಾರಣದಿಂದಾಗಿ ಅವ್ರು ರಾಜಕೀಯದಿಂದ ನಿವೃತ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.