ಹೈಕೋರ್ಟ್ ಮೆಟ್ಟಿಲೇರಿದ ಶಾಸಕ ವಿನಯ್ ಕುಲಕರ್ಣಿ
ಬೆಂಗಳೂರು; ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಧಾರವಾಡಕ್ಕೆ ಭೇಟಿ ನೀಡದಂತೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಶಾಸಕ ವಿನಯ್ ಕುಲಕರ್ಣಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಧಾರವಾಡದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಪ್ರವೇಶ ಅನುಮತಿ ನೀಡಬೇಕೆಂದು ವಿನಯ್ ಕುಲಕರ್ಣಿ ಕೋರಿದ್ದಾರೆ.
ಪ್ರಕರಣವನ್ನು ಸಿಬಿಐ ವಿಚಾರಣೆ ನಡೆಸುತ್ತಿದ್ದು, ಶಾಸಕ ವಿನಯ್ ಕುಲಕರ್ಣಿಯವರನ್ನು ಸಿಬಿಐ ಬಂಧಿಸಿತ್ತು. ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದಿರುವ ವಿನಯ್ ಕುಲಕರ್ಣಿಗೆ, ಸಾಕ್ಷಿ ನಾಶ ಮಾಡುವ ಅನುಮಾನದ ಹಿನ್ನೆಲೆಯಲ್ಲಿ ಧಾರವಾಡ ಪ್ರವೇಶ ಮಾಡಬಾರದೆಂದು ನಿರ್ಬಂಧ ಹೇರಲಾಗಿತ್ತು.
ಆದ್ರೆ, ವಿನಯ್ ಕುಲಕರ್ಣಿಗೆ ಈ ಬಾರಿಯೂ ಧಾರವಾಡದಿಂದ ಕಾಂಗ್ರೆಸ್ ಟಿಕೆಟ್ ನೀಡಿದೆ. ಹೀಗಾಗಿ ಪ್ರಚಾರ ಮಾಡಲು ಹೋಗಬೇಕಿರುವುದರಿಂದ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕೆಂದು ಸೆಷನ್ಸ್ ಕೋರ್ಟ್‌ಗೆ ಮನವಿ ಮಾಡಿದ್ದರು. ಆದ್ರೆ, ಇದಕ್ಕೆ ಸೆಷನ್ಸ್ ಕೋರ್ಟ್ ಅನುಮತಿ ನೀಡಲಿಲ್ಲ. ಹೀಗಾಗಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆ ನಡೆಸಿ ಕೋರ್ಟ್, ಆಕ್ಷೇಪಣೆ ಸಲ್ಲಿಸುವಂತೆ ಸಿಬಿಐಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.