ಇನ್ನು ಅಮರ್ ಜವಾನ್ ಜ್ಯೋತಿ ಇರಲ್ಲ; ಇಂದು ಯುದ್ಧ ಸ್ಮಾರಕ ಜ್ಯೋತಿ ಜೊತೆ ಲೀನ
ನವದೆಹಲಿ: ಇಂಡಿಯಾಗೇಟ್ ಹುಲ್ಲು ಹಾಸಿನ ಬಳಿ ಕಳೆದ ಐವತ್ತು ವರ್ಷಗಳಿಂದ ಉರಿಯುತ್ತಿದ್ದ ಅಮರ್ ಜವಾನ್ ಜ್ಯೋತಿ ಇನ್ನು ನಿಮಗೆ ಕಾಣಸಿಗುವುದಿಲ್ಲ. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಸೈನಿಕರ ನೆನಪಿಗಾಗಿ ಉರಿಯುತ್ತಿದ್ದ ಈ ಜ್ಯೋತಿ ಇವತ್ತು ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ಲೀನವಾಗಲಿದೆ.
ಇಂದು ಮಧ್ಯಾಹ್ನ 3.30ರ ಸುಮಾರಿಗೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಏರ್ ಮಾರ್ಷಲ್ ಬಲಭದ್ರ ರಾಮಕೃಷ್ಣ ಅವರು ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎರಡು ಜ್ಯೋತಿಗಳನ್ನು ನಿರಂತರವಾಗಿ ಉರಿಸುವುದು ಕಷ್ಟಕರವಾಗಿರುವುದರಿಂದ ಈ ಜ್ಯೋತಿಗಳನ್ನು ಲೀನ ಮಾಡಲಾಗುತ್ತಿದೆ ಎಂದು ಸಮಜಾಯಿಷಿ ನೀಡಲಾಗಿದೆ.
ಇದಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಮನಿಷ್ ತಿವಾರಿ, ಇದು ರಾಷ್ಟ್ರೀಯ ದುರಂತ. ಜ್ಯೋತಿ ವಿಲೀನಗೊಳಿಸುವುದು ಎಂದರೆ ಅದು ಇತಿಹಾಸವನ್ನು ಅಳಿಸುವುದು ಎಂದರ್ಥ ಎಂದು ಮನಿಷ್ ತಿವಾರಿ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಿದೆ. ಇದರರ್ಥ ಅಮರ್ ಜವಾನ್ ಜ್ಯೋತಿಯನ್ನು ನಂದಿಸಬಹುದು ಎಂದಲ್ಲ ಎಂದು ಮಿನಿಷ್ ತಿವಾರಿ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.