DistrictsPolitics

ಬೀಳಗಿಯಲ್ಲಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಸಚಿವ ಮುರುಗೇಶ್ ನಿರಾಣಿ

ಬೀಳಗಿ; ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರು ತಮ್ಮ ತವರು ಕ್ಷೇತ್ರ ಬೀಳಗಿಯಲ್ಲಿ ಸಾಂಕೇತಿಕವಾಗಿ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ.ಸಿ.ಗದ್ದಿಗೌಡರ್, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಸ್ಥಳೀಯ ಮುಖಂಡರಾದ ಈರಣ್ಣ ಗಿಡ್ಡಪ್ಪಗೋಳ, ಮಲ್ಲಿಕಾರ್ಜುನ ಅಂಗಡಿ, ಬಿ. ಜಿ. ರೇವಡಿಗಾರ, ಶಂಭೋಜಿ ಇನ್ನೂ ಅನೇಕ ಪಕ್ಷದ ಪ್ರಮುಖರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಲ್ಲೂಕು ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಇದೇ 19ರಂದು ನಿರಾಣಿ ಅವರು ಮತ್ತೊಮ್ಮೆ ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಪ್ರಮುಖರ ಜೊತೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ನಾಮಪತ್ರ ಸಲ್ಲಿಸುವ ಮುನ್ನ ನಿರಾಣಿ ಅವರು ಸಿದ್ದೇಶ್ವರ ಹಾಗೂ ಗಣೇಶ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು.

ಯಾವುದೇ ಚುನಾವಣೆ ವೇಳೆ ನಿರಾಣಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕವೇ ನಾಮಪತ್ರವನ್ನು ಸಲ್ಲಿಕೆ ಮಾಡುತ್ತಾರೆ. ಇದನ್ನು ಕಳೆದ ಹಲವು ವರ್ಷಗಳಿಂದ ಚಾಚು ತಪ್ಪದೆ ಮಾಡಿಕೊಂಡು ಬಂದಿದ್ದಾರೆ.
ಈಗಾಗಲೇ ಬೀಳಗಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ನಿರಾಣಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಮತದಾರರಿಗೆ ಮನವರಿಕೆ ಮಾಡುತ್ತಾ ತಮಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಬೀಳಗಿಯಲ್ಲಿ ಬೀಡು ಬಿಟ್ಟಿರುವ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ಇವತ್ತು ರಮೇಶ್‌ ಜಾರಕಿಹೊಳಿ, ತೇರದಾಳದಲ್ಲಿ ಸಿದ್ದು ಸವದಿ ಸೇರಿದಂತೆ ಹಲವು ನಾಮಪತ್ರ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್‌ ಕೂಡಾ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ.

Share Post