NationalUncategorized

ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ; ಸ್ವತಂತ್ರ ತನಿಖಾ ತಂಡ ರಚನೆಗೆ ಸುಪ್ರೀಂ ಅಸ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್‌ ಭೇಟಿ ವೇಳೆ ಆದ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ತನಿಖಾ ಸಮಿತಿ ರಚನೆ ಮಾಡಲು ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ತನಿಖಾ ತಂಡ ರಚನೆ ಮಾಡಲಾಗಿದ್ದು, ಬಹುಬೇಗ ತನಿಖೆ ನಡೆಸಿ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಜನವರಿ ಐದರಂದು ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್‌ನ ಫಿರೋಜ್‌ಪುರಕ್ಕೆ ಭೇಟಿ ನೀಡಬೇಕಿತ್ತು. ಆದ್ರೆ ರಸ್ತೆ ಮಾರ್ಗವಾಗಿ ಪ್ರಯಾಣಿಸುವಾಗ ರೈತರು ಅವರ ಕಾರಿಗೆ ಅಡ್ಡಗಟ್ಟಿದ್ದರು. ಭದ್ರತಾಲೋಪದಿಂದಲೇ ಪ್ರಧಾನಿ ಮೋದಿಗೆ ತೊಂದರೆಯಾಗಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪಂಜಾಬ್‌ ಸರ್ಕಾರ ತನಿಖಾ ತಂಡವೊಂದನ್ನು ರಚನೆ ಮಾಡಿತ್ತು. ಕೇಂದ್ರ ಸರ್ಕಾರ ಕೂಡಾ ಹಿರಿಯ ಅಧಿಕಾರಿಗಳಿದ್ದ ತಂಡವನ್ನು ರಚನೆ ಮಾಡಿ ತನಿಖೆ ಮಾಡಿಸಿತ್ತು. ಎರಡೂ ವರದಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.

ಆದರೆ, ಪಂಜಾಬ್‌ ಸರ್ಕಾರವೇ ಭದ್ರತಾ ಲೋಪಕ್ಕೆ ಕಾರಣ ಎಂಬ ಆರೋಪವಿದೆ. ಪಂಜಾಬ್‌ ಸರ್ಕಾರ ರಚನೆ ಮಾಡಿರುವ ತಂಡದಿಂದ ಸೂಕ್ತ ರೀತಿಯಲ್ಲಿ ಹಾಗೂ ಪಾರದರ್ಶಕ ರೀತಿಯಲ್ಲಿ ತನಿಖೆ ನಡೆದಿಲ್ಲ ಎಂಬ ಆರೋಪವಿದೆ. ಇನ್ನು ಕೇಂದ್ರ ಸರ್ಕಾರವೇ ಈ ಆರೋಪ ಮಾಡಿರುವುದರಿಂದ ಕೇಂದ್ರ ಸಮಿತಿಯ ಬಗ್ಗೆಯೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಸ್ವತಂತ್ರ ತನಿಖಾ ತಂಡ ರಚನೆ ಮಾಡಬೇಕೆಂಬ ಮನವಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿತ್ತು. ಇದಕ್ಕೆ ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದೆ.

ಪಂಜಾಬ್‌ ಡಿಜಿಪಿ, ರಾಷ್ಟ್ರೀಯ ತನಿಖಾ ದಳದ ಐಜಿ, ಪಂಜಾಬ್‌ ಹಾಗೂ ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌, ಪಂಜಾಬ್‌ ಭದ್ರತಾ ವಿಭಾಗದ ಎಡಿಜಿಪಿ ಅವರು ಈ ಸ್ವತಂತ್ರ ತನಿಖಾ ತಂಡದಲ್ಲಿ ಇರುವಂತೆ  ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

 

 

Share Post