Skip to content
ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕ್ಷೇತ್ರ ಆಯ್ಕೆ ಮಾಡಲು ಭಾರಿ ಕಸರತ್ತು ಮಾಡಿದರು. ಕೊನೆಗೆ ತಮ್ಮ ಸ್ವಂತ ಕ್ಷೇತ್ರ ವರುಣಾವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಮಗ ಯತೀಂದ್ರಗೆ ಬಿಟ್ಟುಕೊಟ್ಟಿದ್ದ ಸಿದ್ದರಾಮಯ್ಯ ಅವರು ಈಗ ಆ ಕ್ಷೇತ್ರವನ್ನು ಮಗನಿಂದ ವಾಪಸ್ ಪಡೆದುಕೊಂಡಿದ್ದಾರೆ. ಆದ್ರೆ, ಸ್ವಕ್ಷೇತ್ರ ವರುಣಾ ಕೂಡಾ ಈ ಬಾರಿ ಸಿದ್ದರಾಮಯ್ಯಗೆ ಸೇಫ್ ಅಲ್ಲ ಎಂದು ಹೇಳಲಾಗುತ್ತಿದೆ.
ಅಂದಹಾಗೆ ಕಳೆದ ಬಾರಿಯೇ ಯತೀಂದ್ರ ವಿರುದ್ಧ ತೊಡೆ ತಟ್ಟೋದಕ್ಕೆ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು ಸಿದ್ಧವಾಗಿದ್ದರು. ಚುನಾವಣೆ ಘೋಷಣೆಯಾಗೋದಕ್ಕೂ ಮೊದಲೇ ವರುಣಾ ಕ್ಷೇತ್ರದಲ್ಲಿ ಸುತ್ತಾಟ ನಡೆಸಿ, ಪಕ್ಷ ಸಂಘಟನೆ ಮಾಡಿದ್ದರು. ಕಳೆದ ಚುನಾವಣೆಯಲ್ಲೇನಾದರೂ ವಿಜಯೇಂದ್ರ ಸ್ಪರ್ಧೆ ಮಾಡಿದ್ದಿದ್ದರೆ ಯತೀಂದ್ರ ಸೋಲುತ್ತಿದ್ದರು ಎಂಬ ಮಾತುಗಳು ಈಗಲೂ ಕೇಳಿಬರುತ್ತವೆ. ಹೀಗಿರುವಾಗಲೇ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣಾ ಕ್ಷೇತ್ರವನ್ನು ಆಯ್ಕೆಮಾಡಿಕೊಂಡಿದ್ದಾರೆ. ಇತ್ತ ಬಿಜೆಪಿ ವಿಜಯೇಂದ್ರ ಅವರನ್ನು ಕಣಕ್ಕಿಳಿಸೋದಕ್ಕೆ ಸಿದ್ಧತೆ ಮಾಡಿಕೊಳ್ತಿದೆ ಎಂದು ಹೇಳಲಾಗ್ತಿದೆ.
ಕಳೆದ ಬಾರಿಯೇ ವಿಜಯೇಂದ್ರ ವರುಣಾ ಕ್ಷೇತ್ರದಿಂದ ನಿಲ್ಲಬೇಕಿತ್ತು. ಆದ್ರೆ ಅದೇನು ಹೊಂದಾಣಿಕೆಯಾಯಿತೋ ಏನೋ ಯಡಿಯೂರಪ್ಪ ಅವರು ವಿಜಯೇಂದ್ರಗೆ ಟಿಕೆಟ್ ಕೊಡಿಸಲಿಲ್ಲ. ಆ ಕಾರಣಕ್ಕಾಗಿಯೇ ಯತೀಂದ್ರ ಗೆಲ್ಲೋದಕ್ಕೆ ಸಾಧ್ಯವಾಯಿತು. ಆದ್ರೆ ಈ ಬಾರಿ ಯಡಿಯೂರಪ್ಪ ಅವರೇ ತಮ್ಮ ಮಗ ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಆಸಕ್ತಿ ತೋರಿಸಿದಂತೆ ಕಾಣುತ್ತಿದೆ. ಅದಕ್ಕೆ ಪುಷ್ಠಿ ನೀಡುವ ರೀತಿಯಲ್ಲೇ ಯಡಿಯೂರಪ್ಪ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇತ್ತ ರಾಜ್ಯ ಬಿಜೆಪಿ ನಾಯಕರು ಕೂಡಾ ವಿಜಯೇಂದ್ರರನ್ನು ವರುಣಾದಲ್ಲಿ ಕಣಕ್ಕಿಳಿಸಲು ಉತ್ಸಾಹ ತೋರುತ್ತಿದ್ದಾರೆ.
ಹಾಗೆ ನೋಡಿದರೆ, ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರ ಬಗ್ಗೆ ಸಾಫ್ಟ್ ಕಾರ್ನರ್ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಕಳೆದ ಚುನಾವಣೆಯಲ್ಲಿ ಯತೀಂದ್ರ ವಿರುದ್ಧ ವಿಜಯೇಂದ್ರರನ್ನು ನಿಲ್ಲಿಸಲಿಲ್ಲ. ಆದ್ರೆ, ಈ ಬಾರಿ ತಮ್ಮ ಶಕ್ತಿ ಇನ್ನೂ ಇದೆ ಎಂಬುದನ್ನು ನಿರೂಪಿಸಿಕೊಳ್ಳಬೇಕಾದ ಹಾಗೂ ಪುತ್ರ ವಿಜಯೇಂದ್ರರ ಶಕ್ತಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಯಡಿಯೂರಪ್ಪಗಿದೆ. ಹೀಗಾಗಿ, ಮಾಜಿ ಸಿಎಂ ವಿರುದ್ಧವೇ ಮಗನನ್ನು ನಿಲ್ಲಿಸಿ ಗೆಲ್ಲಿಸಿದರೆ, ಬಿಜೆಪಿ ಹೈಕಮಾಂಡ್ ಮಗ ವಿಜಯೇಂದ್ರಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ ಎಂಬ ನಂಬಿಕೆ ಯಡಿಯೂರಪ್ಪಗೆ ಇದ್ದಂತೆ ಕಾಣುತ್ತಿದೆ. ಹೀಗಾಗಿಯೇ ಯಡಿಯೂರಪ್ಪ ಅವರು ಮಗನನ್ನು ವರುಣಾದಿಂದ ಕಣಕ್ಕಿಳಿಸೋ ಬಗ್ಗೆ ಚಿಂತನೆ ನಡೆಸಿದ್ದಾರೆ.
ವಿಜಯೇಂದ್ರ ವರುಣಾದಿಂದ ಕಣಕ್ಕಿಳಿದು ಸಿದ್ದರಾಮಯ್ಯ ವಿರುದ್ಧ ಗೆದ್ದರೆ, ಬಿಜೆಪಿಯಲ್ಲಿ ಅವರಿಗೆ ಬೇರೆಯದೇ ಇಮೇಜ್ ಸಿಗುತ್ತದೆ. ಮುಂದೆ ಯಡಿಯೂರಪ್ಪರಂತೆ ದೊಡ್ಡ ನಾಯಕರಾಗಿ ಬೆಳೆಯೋದಕ್ಕೂ ಅವಕಾಶವಿರುತ್ತದೆ. ಬಿಜೆಪಿಯೇ ಅಧಿಕಾರಕ್ಕೆ ಬಂದರೆ ಸಿಎಂ ಹುದ್ದೆ ಕೂಡಾ ನೀಡುವ ಚಾನ್ಸಸ್ ಇರುತ್ತದೆ. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡೇ ಯಡಿಯೂರಪ್ಪ ಅವರು ವರುಣಾದಲ್ಲಿ ಮಗನನ್ನು ಕಣಕ್ಕಿಳಿಸೋ ಧೈರ್ಯ ತೋರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ವರುಣಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,18 ಸಾವಿರ ಇದೆ. ಇವರಲ್ಲಿ ವೀರಶೈವ-ಲಿಂಗಾಯತರು 55 ಸಾವಿರ, ದಲಿತರು 55 ಸಾವಿರ, ಕುರುಬರು 38 ಸಾವಿರ, ನಾಯಕರು 28 ಸಾವಿರ, ಇತರ ಹಿಂದುಳಿದ ವರ್ಗದವರು 18 ಸಾವಿರ, ಒಕ್ಕಲಿಗರು 10 ಸಾವಿರ, ಮುಸ್ಲಿಮರು 5 ಸಾವಿರ, ಬ್ರಾಹ್ಮಣರು 4 ಸಾವಿರ ಮತದಾರರಿದ್ದಾರೆ. ಅಂದರೆ ಇಲ್ಲಿ ಲಿಂಗಾಯತರು ಹಾಗೂ ದಲಿತರೇ ಪ್ರಬಲರು. ವಿಜಯೇಂದ್ರ ಅವರು ಲಿಂಗಾಯತರಾದ್ದರಿಂದ ಲಿಂಗಾಯತ ಮತಗಳನ್ನು ಒಟ್ಟುಗೂಡಿಸಿದರೆ ಸುಲಭವಾಗಿ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ವರುಣಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೇವಲ ಇನ್ನೂರ ಚಿಲ್ಲರೆ ಮತಗಳಿಂದ ಗೆದ್ದಿದ್ದರು ಹೀಗಾಗಿ ಸಿದ್ದರಾಮಯ್ಯಗೆ ಸ್ವಕ್ಷೇತ್ರದಲ್ಲೂ ದೊಡ್ಡ ಮಟ್ಟದ ಪ್ರಾಬಲ್ಯವಿಲ್ಲ. ಪ್ರಬಲ ಅಭ್ಯರ್ಥಿಯಾದರೆ ಸಿದ್ದರಾಮಯ್ಯರನ್ನು ಸೋಲಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿಯದ್ದು.
ಇನ್ನು ಕಾಂಗ್ರೆಸ್‌ನಲ್ಲೇ ಸಿದ್ದರಾಮಯ್ಯ ವಿರುದ್ಧ ಅಸಮಾಧಾನವಿದೆ. ಸಿದ್ದರಾಮಯ್ಯ ಗೆದ್ದರೆ ಅವರೇ ಸಿಎಂ ಸ್ಥಾನ ಕೇಳುತ್ತಾರೆ. ಅವರ ಸೋಲೋದೇ ಒಳ್ಳೆಯದು ಎಂಬ ಆಸೆ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗದ್ದು ಅನ್ನೋ ಮಾತುಗಳಿವೆ. ಇನ್ನು 2013ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಪರಮೇಶ್ವರ್‌ರನ್ನು ಸೋಲಿಸಿದರು ಎಂಬ ಆರೋಪವಿದೆ. ಹೀಗಾಗಿ ದಲಿತರಲ್ಲಿ ಕೆಲವರು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ನಿಲ್ಲುತ್ತೇನೆ ಎಂದಾಗ ಕೆಲ ದಲಿತರು ಸಿದ್ದರಾಮಯ್ಯ ವಿರುದ್ಧ ಕರಪತ್ರಗಳನ್ನು ಹಂಚಿದ್ದರು. ವರುಣಾದಲ್ಲೂ ದಲಿತ ಮತಗಳು 55 ಸಾವಿರದಷ್ಟಿವೆ. ಇಲ್ಲೂ ಕೂಡಾ ದಲಿತರು ಸಿದ್ದರಾಮಯ್ಯ ವಿರುದ್ಧ ಮತ ಹಾಕಿದರೆ ಬಿಜೆಪಿ ಗೆಲ್ಲೋದಕ್ಕೆ ಸಾಧ್ಯವಾಗುತ್ತದೆ. ಇದೇ ಲೆಕ್ಕಾಚಾರದಲ್ಲಿ ವಿಜಯೇಂದ್ರರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.