ಪಾಕ್‌ಗೆ ಹೋಗೋಕು ಮುನ್ನ ಎಚ್ಚರ: ಮೃತ್ಯುಕೂಪ ತೋರಿಸುತ್ತಿವೆ ಹಿಮಪಾತ
ಪಾಕಿಸ್ತಾನ: ಪಾಕಿಸ್ತಾನಕ್ಕೆ ಪ್ರವಾಸ ಹೋಗುವ ಮುನ್ನ ಪ್ರವಾಸಿಗರು ಅಲ್ಲಿನ ಹವಾಮಾನ ಪರಿಸ್ಥಿತಿಯನ್ನು ತಿಳಿದು ಪ್ರಯಾಣ ಬೆಳೆಸಿ ಯಾಕಂದ್ರೆ ಕಳೆದ ಕೆಲವು ವಾರಗಳಿಂದ ಪಾಕ್‌ನಲ್ಲಿ ಅತಿಯಾದ ಹಿಮಪಾತ ಉಂಟಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡು ಜನ ಪರದಾಡುವ ಪರಿಸ್ಥಿತಿ ಬಂದಿದೆ. ಚಿಲ್ ಮೂಡ್‌ಗಾಗಿ ಪ್ರಕೃತಿ ಸೌಂದರ್ಯ ಸವಿಯಲು ಹೊರಟ ಪ್ರವಾಸಿಗರು ಪ್ರಾಣ ಕಳೆದುಕೊಂಡಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿ ಬಳಿ ಮುರ್ರೆಯಲ್ಲಿ ನಡೆದಿದೆ. ಸುಮಾರು 16ಮಂದಿ ಹಿಮಪಾತಕ್ಕೆ ಮೃತಪಟ್ಟಿರುವುದಾಗಿ ಅಲ್ಲಿನ ಸೇನೆ ತಿಳಿಸಿದೆ. ಜೊತೆಗೆ ಭಾರೀ ಹಿಮಪಾತಕ್ಕೆ ಹಲವಾರು ವಾಹನ ಹಿಮದಲ್ಲಿ ಸಿಲುಕಿರುವ ಆತಂಕಕಾರಿ ಮಾಹಿತಿಯನ್ನು ತಿಳಿಸಿದ್ದಾರೆ. ಹಿಮದಲ್ಲಿ ಸಿಲುಕಿರುವ ಶವಗಳನ್ನು ಹಾಗೂ ವಾಹನಗಳನ್ನು ಹೊರತೆಗೆಯಲು ಪಾಕ್ ಸೇನೆ ಮತ್ತು ಅಲ್ಲಿನ ನಾಗರೀಕ ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ.
ಪ್ರಸ್ತುತ ಪ್ರವಾಸಿ ಸ್ಥಳ ಮುರ್ರೆಗೆ ಹೋಗುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಇದಕ್ಕೂ ಮೊದಲು ಅಲ್ಲಿಗೆ ತೆರಳಿರುವವರು ಹೊರಬರಲಾರದೆ ನರಕಯಾತನೆ ಪಡುತ್ತಿದ್ದಾರೆ. ಸುಮಾರು ಹತ್ತು ಸಾವಿರ ಜನ ಭೇಟಿ ನೀಡಿರುವುದಾಗಿ ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಶೇಖ್ ರಶೀದ್ ತಿಳಿಸಿದ್ದಾರೆ. 15-20ವರ್ಷಗಳಲ್ಲಿ ಇಷ್ಟೊಂದು ಜನಸಂಖ್ಯೆಯನ್ನು ನಾನು ನೋಡಿಲ್ಲ ಎಂದಿದ್ದಾರೆ. ಬರೋಬ್ಬರಿ ಒಂದು ಸಾವಿರ ವಾಹನಗಳು ಹಿಮದಲ್ಲಿ ಸಿಲುಕಿರುವ ಶಂಕೆ ವ್ಯಕ್ತಪಡಿಸಿರುವ ಶೇಖ್ ರಶೀದ್, ಅಗತ್ಯ ನೆರವಿಗಾಗಿಸ್ಥಳೀಯರ ಮೊರೆ ಹೋಗಿದ್ದಾರೆ. ಪ್ರವಾಸಿಗರಿಗೆ ಕಂಬಳಿ, ಅನ್ನ ಆಹಾರ ನೀಡುತ್ತಿದ್ದಾರೆ. ನಾಳೆಯೊಳಗೆ ರಸ್ತೆ ತೆರವುಗೊಳಿಸುವುದಾಗಿ ಸಚಿವರು ತಿಳಿಸಿದ್ರು. ಹಿಮದಲ್ಲಿ ಸಿಲುಕಿರುವವರ ರಕ್ಷಣೆಗೆ ಪಾಕಿಸ್ತಾನ ಸೇನೆ ಮತ್ತು ಅಲ್ಲಿನ ಪಂಜಾಬ್ ಸರ್ಕಾರ ಶ್ರಮಿಸುತ್ತಿದೆ. ಪ್ರಸ್ತುತ ಮುರ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಮುಂದುವರಿದು ಪ್ರವಾಸಿಗರ ಸಾವಿಗೆ ಕಾರಣ ತಿಳಿಸಿದ್ದಾರೆ ಶೇಖ್ ರಶೀದ್. ಜನ ಸತ್ತಿದ್ದು ಚಳಿಯಿಂದ ಅಲ್ಲ ಎಂಬ ಮಾಹಿತಿಯನ್ನು ಹೇಳಿದ್ದಾರೆ. ಚಳಿಯಿಂದ ತಮ್ಮನ್ನು ತಾವು ಬೆಚ್ಚಗಿರಿಸಲು ಕಾರಿನಲ್ಲಿ ಹೀಟರ್ ಆನ್ ಮಾಡಿ ಮಲಗಿದ್ದಾರೆ. ಬಿಸಿ ಗಾಳಿಗೆ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಸಚಿವರು ತಿಳಿಸಿದ್ದಾರೆ.