Sports

ಕೊನೆಗೂ ತನ್ನ ಯೋಜನೆ ಬಹಿರಂಗಪಡಿಸಿದ ಸೌರವ್‌ ಗಂಗೂಲಿ

ನವದೆಹಲಿ; ತಮ್ಮ ಜೀವನದಲ್ಲಿ ಹೊಸ ಪಯಣ ಆರಂಭಿಸುವುದಾಗಿ ಟ್ವೀಟ್ ಮಾಡಿ ಕುತೂಹಲ ಹುಟ್ಟಿಸಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೊನೆಗೂ ತಮ್ಮ ಜೀವನದ ಹೊಸ ಯೋಜನೆಗಳನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸೌರವ್‌ ಗಂಗೂಲಿ, ಯಾವುದೇ ಕನಸು ನನಸುಗೊಳ್ಳಲು ಸರಿಯಾದ ತರಬೇತಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವದಾದ್ಯಂತ ಮಾರ್ಗದರ್ಶಕರಿಗೆ ನೆರವಾಗುವುದಾಗಿ ತಿಳಿಸಿದ್ದಾರೆ.

ಬಹಳ ಕಾಲದಿಂದ ನಾವು ನಟರು, ಆಟಗಾರರು ಹಾಗೂ ಯಶಸ್ವಿ ಸಿಇಒಗಳನ್ನು ಅವರ ಗಮನಾರ್ಹ ಸಾಧನೆಯನ್ನು ಕೊಂಡಾಡುತ್ತಲೇ ಬಂದಿದ್ದೇವೆ. ಈಗ ನೈಜ ಹೀರೊಗಳು, ಅವರ ಕೋಚ್ ಹಾಗೂ ತರಬೇತಿ ನೀಡುವವರನ್ನು ತೇಜೋಮಯಗೊಳಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ. ವಿಶ್ವದಾದ್ಯಂತ ತರಬೇತುದಾರರು, ಮಾರ್ಗದರ್ಶಕರು ಹಾಗೂ ಅಧ್ಯಾಪಕರಿಗಾಗಿ ನಾನು ಏನನ್ನಾದರೂ ಮಾಡಲು ಬಯಸುತ್ತೇನೆ. ಅವರೆಲ್ಲರ ರಾಯಭಾರಿಯಾಗಿ ಇಂದಿನಿಂದಲೇ ನೆರವಾಗಲಿದ್ದೇನೆ. ಈ ದೂರದೃಷ್ಟಿಯ ಭಾಗವಾದ ‘ಕ್ಲಾಸ್‌ಪ್ಲಸ್’ ಆ್ಯಪ್‌ಗೂ ಧನ್ಯವಾದ ಸಲ್ಲಿಸಿದ್ದಾರೆ.

ನನ್ನ ಹಿಂದಿನ ಪೋಸ್ಟ್ ಬಗ್ಗೆ ಬಹಳಷ್ಟು ಪ್ರಶ್ನೆಗಳು ಎದ್ದಿವೆ. ಇತ್ತೀಚಿನಿಂದ ನಾನು ನಮ್ಮ ಸಮಾಜಕ್ಕೆ ನಿಸ್ವಾರ್ಥವಾಗಿ ಸಹಾಯ ಮಾಡುತ್ತಿರುವ ಮತ್ತು ಪ್ರತಿದಿನ ಭಾರತವನ್ನು ಶ್ರೇಷ್ಠಗೊಳಿಸುತ್ತಿರುವ ಒಂದು ಗುಂಪಿನ ಜನರ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಐಪಿಎಲ್‌ ಅತ್ಯುತ್ತಮ ಆಟಗಾರರನ್ನು ನಮಗೆ ಒದಗಿಸಿದೆ. ಆದರೆ ಈ ಎಲ್ಲ ಆಟಗಾರರ ಯಶಸ್ಸಿಗಾಗಿ ಅವರ ತರಬೇತುದಾರರು ಸುರಿಸಿದ ಬೆವರು ಹಾಗೂ ಕಠಿಣ ಪ್ರಯತ್ನವು ನನಗೆ ಮತ್ತಷ್ಟು ಪ್ರೇರಣೆ ತುಂಬಿದೆ. ಇದು ಕೇವಲ ಕ್ರಿಕೆಟ್‌ಗೆ ಮಾತ್ರವಲ್ಲ, ಶೈಕ್ಷಣಿಕ, ಫುಟ್‌ಬಾಲ್, ಸಂಗೀತ ಸೇರಿದಂತೆ ಇತರ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.

Share Post