InternationalNationalSports

ವಿಶ್ವಕಪ್ ಕ್ರಿಕೆಟ್: ಆ ಒಂದು ಬಾಲ್‌ನಿಂದ ಕ್ರಿಕೆಟ್ ನಿಯಮವೇ ಬದಲಾಯಿತು!

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ರೋಚಕ ಪಂದ್ಯ ನಡೆಯುತ್ತಿತ್ತು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ನ್ಯೂಜಿಲೆಂಡ್ ಪಂದ್ಯವನ್ನು ಟೈ ಮಾಡಿತು. ಆ ಸಮಯದಲ್ಲಿ ಆಸೀಸ್ ನಾಯಕ ತನ್ನ ತಂಡವನ್ನು ಗೆಲ್ಲಿಸಲು ಹೊಸ ತಂತ್ರವನ್ನು ರೂಪಿಸಿದರು. ಬೌಲರ್‌ಗೆ ಕರೆ ಮಾಡಿ ಸಲಹೆ ನೀಡಿದರು. ರನ್ ಅಪ್ ನಿಂದ ವಾಕಿಂಗ್ ಬಂದ ಬೌಲರ್ ತನ್ನ ಕ್ಯಾಪ್ಟನ್ ಹೇಳಿದಂತೆ ಬೌಲ್ ಮಾಡಿದ. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳು ಆ ಚೆಂಡಿಗೆ ಉತ್ತರಿಸಲಾಗದೇ ಹೋದರು. ಒಂದೂ ರನ್‌ ಬರದಂತಾಯಿತು.

ಆಸೀಸ್ ಪಂದ್ಯ ಗೆದ್ದರೂ ಆ ಒಂದು ಬಾಲ್ ನಿಂದಾಗಿ ಟೀಕೆ ಎದುರಿಸಬೇಕಾಯಿತು. ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ಬೌಲಿಂಗ್ ಮಾಡಲು ಹೇಳಿದ ಅಂದಿನ ಆಸ್ಟ್ರೇಲಿಯದ ನಾಯಕ ಯಾರು ಗೊತ್ತಾ…? ಒಂದು ಕಾಲದಲ್ಲಿ ಟೀಂ ಇಂಡಿಯಾಗೆ ಕೋಚ್ ಆಗಿ ವಿವಾದಕ್ಕೀಡಾಗಿದ್ದ ಗ್ರೇಗ್ ಚಾಪೆಲ್. ಆಗ ಬೌಲರ್ ಟ್ರೆವರ್ ಚಾಪೆಲ್. ಇಬ್ಬರೂ ಸಹೋದರರು.

ನಿಜವಾಗಿ ಏನಾಯಿತು?
1981 ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಬೆನ್ಸನ್ ಮತ್ತು ಹೆಡ್ಜಸ್ ಟ್ರೈ ಸರಣಿ. ಈ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದರೆ, ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು.

ಫೆ.1ರಂದು ಎಂಸಿಜಿ ಸ್ಟೇಡಿಯಂನಲ್ಲಿ ಉಭಯ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯುತ್ತಿತ್ತು. ನ್ಯೂಜಿಲೆಂಡ್ ಕೊನೆಯ ಓವರ್‌ನಲ್ಲಿ 10 ರನ್ ಗಳಿಸಿದರೆ, ಪಂದ್ಯದ ಜೊತೆಗೆ ಸರಣಿಯನ್ನೂ ಗೆಲ್ಲುತ್ತಿತ್ತು.

ಆ ಸಮಯದಲ್ಲಿ ನಾಯಕ ಗ್ರೆಗ್ ಚಾಪೆಲ್ ತನ್ನ ಸಹೋದರ ಟ್ರೆವರ್ ಚಾಪೆಲ್‌ಗೆ ಚೆಂಡನ್ನು ನೀಡಿದರು. ನಾಯಕನ ವಿಶ್ವಾಸಕ್ಕೆ ತಕ್ಕಂತೆ, ಟ್ರೆವರ್ ತನ್ನ ಓವರ್‌ನ ಮೊದಲ ಐದು ಎಸೆತಗಳಲ್ಲಿ ಕೇವಲ ಮೂರು ರನ್‌ಗಳನ್ನು ಬಿಟ್ಟುಕೊಟ್ಟರು. ಕೊನೆಯ ಎಸೆತದಲ್ಲಿ ಒಂದು ಸಿಕ್ಸರ್ ನ್ಯೂಜಿಲೆಂಡ್ ಪಂದ್ಯವನ್ನು ಟೈ ಮಾಡಬಹುದಿತ್ತು. ಆದರೆ ಯಾವುದೇ ಬೆಲೆ ತೆತ್ತಾದರೂ ಪಂದ್ಯವನ್ನು ಗೆಲ್ಲಬೇಕೆಂದು ಬಯಸಿದ ಗ್ರೆಗ್ ಚಾಪೆಲ್ ತನ್ನ ಸಹೋದರನನ್ನು ಕರೆದು ಅಂಡರ್ ಆರ್ಮ್ ಬೌಲಿಂಗ್ ಮಾಡಲು ಸಲಹೆ ನೀಡಿದರು.

ಟ್ರೆವರ್ ಕೊನೆಯ ಎಸೆತವನ್ನು ಹಾಗೆಯೇ ಬೌಲ್ ಮಾಡಿದರು. ಕ್ರೀಸ್‌ನಲ್ಲಿದ್ದ ಮೆಕೆಚ್ನಿ ಆ ಬಾಲ್‌ನ್ನು ಮುಟ್ಟಲು ಸಾಧ್ಯವಾಗಲಿಲ್ಲ.  ಡಿಫೆನ್ಸ್‌ನೊಂದಿಗೆ ಆಟವನ್ನು ಕೊನೆಗೊಳಿಸಿದರು. ಆ ಬಳಿಕ ಸಿಟ್ಟಿನಿಂದ ಬ್ಯಾಟ್ ಅನ್ನು ಕ್ರೀಡಾಂಗಣದಲ್ಲಿ ಎಸೆದಿದ್ದರು.

ಅಂಡರ್ ಆರ್ಮ್ ಎಂದರೇನು?
ಅಂಡರ್ ಆರ್ಮ್ ಬೌಲಿಂಗ್ ಎಂದರೆ ಭುಜವನ್ನು ಮೇಲಕ್ಕೆತ್ತದೆ ತೋಳಿನ ಕೆಳಗೆ ಚೆಂಡನ್ನು ಎಸೆಯುವುದು.

ಈ ಘಟನೆಗೂ ಮುನ್ನ ನಿಯಮ ಪುಸ್ತಕದಲ್ಲಿ ಅಂಡರ್ ಆರ್ಮ್ ಬೌಲಿಂಗ್ ಬಗ್ಗೆ ಮಾಹಿತಿಯೇ ಇರಲಿಲ್ಲ. ಹೀಗಾಗಿ ಚಾಪೆಲ್‌ ಸಹೋದರರು ಅಂಡರ್ ಆರ್ಮ್ ಬೌಲಿಂಗ್ ಅನ್ನು ಗೆಲುವಿನ ಅಸ್ತ್ರವನ್ನಾಗಿ ಮಾಡಿಕೊಂಡರು.

ಟೀಕೆಗಳ ಸುರಿಮಳೆಯಾಯಿತು
ಈ ಘಟನೆಯ ನಂತರ, ಚಾಪೆಲ್ ಸಹೋದರರು ದೇಶ ಮತ್ತು ವಿದೇಶಗಳಿಂದ ಟೀಕೆಗಳನ್ನು ಎದುರಿಸಿದರು. ಕ್ರಿಕೆಟಿಗರು,  ಕ್ರೀಡಾ ಅಭಿಮಾನಿಗಳಷ್ಟೇ ಅಲ್ಲ, ಪ್ರಧಾನಿಗಳು ಕೂಡಾ ಇದಕ್ಕೆ ಸ್ಪಂದಿಸಿದರು. ಆಗಿನ ನ್ಯೂಜಿಲೆಂಡ್ ಪ್ರಧಾನಿ ಈ ಘಟನೆಯನ್ನು “ಕ್ರಿಕೆಟ್ ಇತಿಹಾಸದಲ್ಲಿ ನಾನು ನೆನಪಿಸಿಕೊಳ್ಳಬಹುದಾದ ಅತ್ಯಂತ ಅಸಹ್ಯಕರ ಘಟನೆ” ಎಂದು ಬಣ್ಣಿಸಿದ್ದರು.

ಈ ಘಟನೆಯ ನಂತರ ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಬೌಲಿಂಗ್ ನಿಯಮಗಳನ್ನು ಬದಲಾಯಿಸಿತು. ನಿಯಮಗಳ ಪುಸ್ತಕದ ನಿಯಮ 24, ಅಂಡರ್ ಆರ್ಮ್ ಬೌಲಿಂಗ್ ಅನ್ನು ನಿಷೇಧಿಸುತ್ತದೆ. ಪಂದ್ಯದ ಮೊದಲು ಎರಡೂ ತಂಡಗಳು ನಿರ್ದಿಷ್ಟವಾಗಿ ಒಪ್ಪಿಕೊಂಡರೆ ಪಂದ್ಯದವರೆಗೆ ಅಂಡರ್ ಆರ್ಮ್ ಬೌಲಿಂಗ್ ಕಾನೂನುಬದ್ಧವಾಗಿರುತ್ತದೆ ಎಂದು ಘೋಷಿಸಲಾಗಿದೆ.

ಮೆಕ್‌ಗ್ರಾತ್ ಕೂಡ ಇದೇ ರೀತಿ…
2005 ರಲ್ಲಿ ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಟ್ವೆಂಟಿ-20 ಪಂದ್ಯದಲ್ಲಿ, ಆಸೀಸ್ ಬೌಲರ್ ಮೆಕ್‌ಗ್ರಾತ್ ಮೋಜಿಗಾಗಿ ಅಂಡರ್ ಆರ್ಮ್ ಬೌಲ್ ಮಾಡಲು ಪ್ರಯತ್ನಿಸಿದರು. ಆದಾಗ್ಯೂ, ಅಂಪೈರ್ ಬಿಲ್ಲಿ ಬಾರ್ಡನ್, ಮೆಕ್‌ಗ್ರಾತ್‌ಗೆ ತಮ್ಮ ವಿಶಿಷ್ಟ ಶೈಲಿಯಲ್ಲಿ ಛೀಮಾರಿ ಹಾಕಿದರು.

ಈಡನ್ ಮಾರ್ಕ್ ನಲ್ಲಿ ನಡೆದ ಈ ಎರಡೂ ರಾಷ್ಟ್ರಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸೀಸ್ ನಿಗದಿತ 20 ಓವರ್ ಗಳಲ್ಲಿ 215 ರನ್ ಗಳಿಸಿತು. ನಂತರ ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲೆಂಡ್ 19.5 ಓವರ್‌ಗಳಲ್ಲಿ 9 ವಿಕೆಟ್‌ಗೆ 170 ರನ್ ಗಳಿಸಿತು.

ಕೊನೆಯ ಬಾಲ್‌ಗೆ 45 ರನ್‌ಗಳಿದ್ದಾಗ, ಮೆಕ್‌ಗ್ರಾತ್ ಆಟವಾಡುವ ಅಂಡರ್ ಆರ್ಮ್ ಬೌಲ್ ಮಾಡಲು ಪ್ರಯತ್ನಿಸಿದರು. ಅಂಪೈರ್ ಒಪ್ಪದ ಕಾರಣ ಅವರು ಸಾಮಾನ್ಯವಾಗಿ ಬೌಲಿಂಗ್ ಮಾಡಿದರು.

Share Post