ಕನ್ನಡ ನಾಮಫಲಕ ಕಡ್ಡಾಯ ವಿಚಾರ; ಸುಗ್ರೀವಾಜ್ಞೆ ವಾಪಸ್ ಮಾಡಿದ ರಾಜ್ಯಪಾಲ
ಬೆಂಗಳೂರು; ವ್ಯಾಪಾರ ಸ್ಥಳಗಳಲ್ಲಿ ಕನ್ನಡ ಬೋರ್ಡ್‌ಗಳ ಕಡ್ಡಾಯ ಮಾಡುವ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ವಾಪಸ್ ಕಳುಹಿಸಿದ್ದಾರೆ. ವ್ಯಾಪಾರ ಸ್ಥಳಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಇದು ಜಾರಿಗೆ ಬರಬೇಕಾದರೆ ರಾಜ್ಯಪಾಲ ಅಂಕಿತ ಅವಶ್ಯಕ. ಆದರೆ ರಾಜ್ಯಪಾಲರು, ಈ ಸುಗ್ರೀವಾಜ್ಞೆಯನ್ನು ವಾಪಸ್ ಮಾಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನ್ನಡ ಬಳಕೆ ಕಡ್ಡಾಯ ಮಾಡಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಜನವರಿ 5 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ’ಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿತ್ತು. ಇದಕ್ಕೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಆದ್ರೆ ಇದನ್ನು ನಿರಾಕರಿಸಿರುವ ರಾಜ್ಯಪಾಲರು, ವಿಧೇಯಕ ಮಂಡಿಸಿ ವಿಧಾನಸಭೆಯಲ್ಲೇ ಅಂಗೀರಿಸುವಂತೆ ಸೂಚನೆ ನೀಡಿದ್ದಾರೆ.
ಫೆಬ್ರವರಿ 12 ರಂದು ಜಂಟಿ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿರುವ ಕಾರಣ ರಾಜ್ಯಪಾಲರು ಸುಗ್ರೀವಾಜ್ಞೆಯನ್ನು ತಿರಸ್ಕರಿಸಿರಬಹುದು.