BengaluruPolitics

ಧರ್ಮ ಒಡೆಯೋ ಪ್ರಯತ್ನಕ್ಕೆ ಪಶ್ಚಾತ್ತಾಪ; ಸಿದ್ದು ಹೇಳಿಕೆಗಳು ಮತ್ತೆ ಕೈಗೆ ಮುಳುವಾಗುತ್ವಾ..?

ಬೆಂಗಳೂರು; ೨೦೧೮ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸೋಲೋದಕ್ಕೆ ಪ್ರಮುಖ ಕಾರಣ ಧರ್ಮ ಒಡೆಯಲು ಪ್ರಯತ್ನಿಸಿದ್ದು. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಇದರಿಂದಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ದೊಡ್ಡ ಪೆಟ್ಟು ತಿನ್ನಬೇಕಾಯಿತು. ಈಗ ಮತ್ತೆ ಚುನಾವಣೆ ಹತ್ತಿರಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ಧರ್ಮ, ನಂಬಿಕೆಗಳ ವಿಚಾರವಾಗಿ ಮಾತನಾಡುತ್ತಾ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಮಾಂಸಾಹಾರ ಸೇವಿಸಿ ದೇಗುಲ ಭೇಟಿ ಸೇರಿದಂತೆ ವಿವಿಧ ವಿಚಾರವಾಗಿ ಸಿದ್ದರಾಮಯ್ಯ ಅವರ ಹೇಳಿಕೆಗಳು ವಿವಾದಕ್ಕೀಡಾಗಿವೆ. ಈ ನಡುವೆಯೇ ಸಿದ್ದರಾಮಯ್ಯ ಅವರಿಗೆ ಧರ್ಮ ಒಡೆಯುವ ವಿಚಾರವಾಗಿ ಕೈಗೊಂಡ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಉಂಟಾಗಿದೆ. ಆ ನಿರ್ಧಾರ ಕೈಗೊಳ್ಳಬಾರದಿತ್ತು ಎಂದು ರಂಭಾಪುರಿ ಶ್ರೀಗಳ ಮುಂದೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಆದ್ರೆ ಅದು ಕೂಡಾ ಟೀಕೆಗೆ ಗುರಿಯಾಗುತ್ತಿದ್ದಂತೆ ನಾನು ಪಶ್ಚಾತ್ತಾಪ ವ್ಯಕ್ತಪಡಿಸಿಯೇ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಮಠಕ್ಕೆ ಕಳೆದ ಶುಕ್ರವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಟ್ಟ ಮೊದಲ ಬಾರಿಗೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಸರ್ಕಾರದ ಅವಧಿಯಲ್ಲಿ ಪ್ರತ್ಯೇಕ ಲಿಂಗಾಯತ ಚಳವಳಿ ಆರಂಭಿಸಿದ್ದಕ್ಕೆ  ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಂಭಾಪುರಿ ಪೀಠದ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿ ಅವರು, ‘ಧರ್ಮ ಒಡೆಯುವ ಪ್ರಯತ್ನ ಮಾಡಿರಲಿಲ್ಲ. ಕೆಲವರು ನನ್ನ ದಾರಿ ತಪ್ಪಿಸಿದ್ದರು. ಅದರಿಂದಾಗಿ ನನಗೆ ಖಂಡಿತವಾಗಿಯೂ ಪಶ್ಚಾತ್ತಾಪವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು’ ಎಂದು ತಿಳಿಸಿದ್ದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವೀರಶೈವ ಧರ್ಮದಿಂದ ಲಿಂಗಾಯತ ಧರ್ಮ ಒಡೆಯುವುದಕ್ಕೆ ಕುಮ್ಮಕ್ಕು ನೀಡಿದ ಆರೋಪ ಅವರ ಮೇಲಿತ್ತು. ಈ ಬಗ್ಗೆ ಅವರ ಮನಸ್ಸಿನಲ್ಲಿದ್ದ ದುಗುಡವನ್ನು ಪ್ರಾಂಜಲ ಮನಸ್ಸಿನಿಂದ ಬಿಚ್ಚಿಟ್ಟಿದ್ದಾರೆ. ಧರ್ಮದ ವಿಚಾರದಲ್ಲಿ ಯಾವತ್ತೂ ಆವೇಶ ಮಾಡುವುದಿಲ್ಲ. ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ’ ಎಂದಿದ್ದರು.

ಇನ್ನೂ ಮುಂದೆ ಧರ್ಮಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸ್ವಾಮೀಜಿ ತಿಳಿಸಿದ್ದರು.

  ಮಠದಲ್ಲಿ ನಡೆದದ್ದನ್ನು ಸ್ವಾಮೀಜಿ ಮಾಧ್ಯಮಗಳ ಮುಂದೆ ಹೇಳುತ್ತಿದ್ದಂತೆ ಸಿದ್ದರಾಮಯ್ಯ ಅವರು ತಮ್ಮ ವರಸೆ ಬದಲಿಸಿದರು. ನಾನು ಪಶ್ಚಾತ್ತಾಪ ಪಟ್ಟಿಲ್ಲ. ಆ ಸಂದರ್ಭದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ವಿವರಿಸಿದ್ದೇನೆ ಅಷ್ಟೇ ಎಂದುಬಿಟ್ಟರು. ಇದೆಲ್ಲಾ ನೋಡ್ತಾ ಇದ್ರೆ ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಮತ್ತೆ ಗೊಂದಲಕ್ಕೀಡಾಗುತ್ತಿರುವಂತೆ ಕಾಣುತ್ತಿದೆ. ಯಾರನ್ನೋ ಓಲೈಕೆಗಾಗಿ ಏನೇನೋ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದಂತೆ ಭಾಸವಾಗುತ್ತಿದೆ.
   ಸಾವರ್ಕರ್‌ ವಿಚಾರವಾಗಿ ಅವರು ನೀಡಿದ ಹೇಳಿಕೆ ಇರಬಹುದು, ಮಾಂಸ ತಿಂದು ದೇವಸ್ಥಾನಕ್ಕೆ ಹೋದ ವಿಚಾರ ಇರಬಹುದು. ಎಲ್ಲವೂ ಸಿದ್ದರಾಮಯ್ಯ ಪಾಲಿಗೆ ತಿರುಮಂತ್ರ ಹೇಳುತ್ತಿವೆ. ಇತ್ತೀಚೆಗೆ ಮಡಿಕೇರಿಗೆ ಭೇಟಿ ನೀಡಿದ್ದಾಗ ಸಿದ್ದರಾಮಯ್ಯ ಅವರು ನಾಟಿಕೋಳಿ ಮಾಂಸ ತಿಂದು ದೇವಸ್ಥಾನ ಒಂದಕ್ಕೆ ಭೇಟಿ ನೀಡಿದ್ದರು. ಇದು ವಿವಾದವಾಗುತ್ತಿದ್ದಂತೆ, ತಿಂದು ದೇಗುಲಕ್ಕೆ ಹೋದರೆ ತಪ್ಪೇನು..? ಎಂದು ಪ್ರಶ್ನೆ ಮಾಡಿದ್ದರು. ಆದ್ರೆ, ನಂತರ ಅವ್ರು ಎಚ್ಚೆತ್ತುಕೊಂಡು ನಾನು ಅಂದು ಮಾಂಸಾಹಾರ ಸೇವಿಸಿಯೇ ಇಲ್ಲ ಎಂದುಬಿಟ್ಟರು.
Share Post