Politics

ಶಿವಮೊಗ್ಗ ಲೋಕಸಭಾ; ರಾಘವೇಂದ್ರ ಸೋಲಿಸಲು, ಗೀತಾ ಗೆಲ್ಲಿಸಲು ಕಾರಣಗಳೇ ಇಲ್ಲ!

ಶಿವಮೊಗ್ಗ; ಯಾವುದೇ ಚುನಾವಣೆಯಲ್ಲಿ ಒಬ್ಬರ ಸೋಲಿಗೆ ಹಾಗೂ ಮತ್ತೊಬ್ಬರ ಗೆಲುವಿಗೆ ಯಾವುದಾದರೂ ಒಂದು ಕಾರಣವಿರುತ್ತದೆ.. ಹಾಲಿ ಅಧಿಕಾರದಲ್ಲಿರುವವರು ಸರಿಯಾಗಿ ಕೆಲಸ ಮಾಡದೇ ಹೋದರೆ, ಸಾಮಾನ್ಯ ಜನರಿಗೆ ಸಿಗದೇ ಓಡಾಡುತ್ತಿದ್ದವರಾದರೆ, ಜನ ಬದಲಾವಣೆ ಬಯಸುತ್ತಾರೆ… ಆದ್ರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಈ  ಬಾರಿ ಕಾಂಗ್ರೆಸ್‌ನಿಂದ ಬಂಗಾರಪ್ಪ ಅವರ ಪುತ್ರಿ ಹಾಗೂ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಪತ್ನಿ ಗೀತಾ ಶಿವರಾಜ್‌ಕುಮಾರ್‌ ಕಣದಲ್ಲಿದ್ದಾರೆ. ಎದುರಾಳಿಯಾಗಿ ಹಾಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಬಿಜೆಪಿಯಿಂದ ಕಣಕ್ಕಿಳಿಯಲಿದ್ದಾರೆ.. ಇಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಲು ಕಾರಣಗಳೇ ಸಿಗೋದಿಲ್ಲ, ಹೋಗಲಿ, ಗೀತಾ ಶಿವರಾಜ್‌ಕುಮಾರ್‌ ಅವರನ್ನು ಗೆಲ್ಲಿಸೋದಕ್ಕೆ ಕಾರಣಗಳು ಏನಾದರೂ ಇವೆಯಾ ಎಂದು ಹುಡುಕಿದರೂ, ಅದಕ್ಕೂ ಕಾರಣ ಸಿಗೋದಿಲ್ಲ.. ಆದರೂ ಈ ಬಾರಿಯ ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಾಕಷ್ಟು ರಂಗೇರಲಿದೆ..

ವಿರೋಧಿಗಳೂ ಹೊಗಳುವಷ್ಟು ಕೆಲಸ ಮಾಡಿಸಿರುವ ರಾಘವೇಂದ್ರ;

ವಿರೋಧಿಗಳೂ ಹೊಗಳುವಷ್ಟು ಕೆಲಸ ಮಾಡಿಸಿರುವ ರಾಘವೇಂದ್ರ; ಬಿ.ವೈ.ರಾಘವೇಂದ್ರ ಮೂರು ಬಾರಿ ಸಂಸದರಾಗಿದ್ದಾರೆ.. ಯಡಿಯೂರಪ್ಪ ಅವರ ಪುತ್ರ ಆದರೂ ಕೂಡಾ, ರಾಘವೇಂದ್ರ ಅವರು ತಮ್ಮದೇ ಆದ ಇಮೇಜ್‌ ಬೆಳೆಸಿಕೊಂಡಿದ್ದಾರೆ… ಯಡಿಯೂರಪ್ಪ ಪುತ್ರನಾಗಿ ಮೊದಲ ಬಾರಿಗೆ ಬಂಗಾರಪ್ಪ ಅವರನ್ನು ಸೋಲಿಸಿದ್ದ ಬಿ.ವೈ.ರಾಘವೇಂದ್ರ ಸ್ವಂತ ಬಲದಿಂದ ಚುನಾವಣೆ ಗೆಲ್ಲೋ ಶಕ್ತಿಯನ್ನು ಗಳಿಸಿ ಸಾಕಷ್ಟು ವರ್ಷಗಳಾಗಿವೆ.. ಅವರ ಅಧಿಕಾರವಧಿಯಲ್ಲಿ ಶಿವಮೊಗ್ಗದಲ್ಲಿ ಸಾಕಷ್ಟು ಕೆಲಸಗಳಾಗಿವೆ. ವಿಮಾನ ನಿಲ್ದಾಣ, ಉತ್ತವಾದ ಗುಣಮಟ್ಟದ ರಸ್ತೆಗಳು, ದೊಡ್ಡ ದೊಡ್ಡ ಕಟ್ಟಡಗಳು, ಬಸ್‌ ನಿಲ್ದಾಣಗಳು ಹೀಗೆ ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಬಂಗಾರಪ್ಪ ಅವರು ವೈಯಕ್ತಿಕವಾಗಿ ಜನಕ್ಕೆ ಸಾಕಷ್ಟು ಕೆಲಸಗಳನ್ನು ಮಾಡಿಕೊಟ್ಟರೂ, ಅಭಿವೃದ್ಧಿ ಅಂತ ಬಂದಾಗ ಬಿ.ವೈ.ರಾಘವೇಂದ್ರ ಅವರ ಕೆಲಸವೇ ಮೇಲುಗೈ ಸಾಧಿಸುತ್ತದೆ..

ಹೋಗಲಿ, ರಾಘವೇಂದ್ರ ಅವರು ಕೋಮ ದ್ವೇಷ ಹರಡುತ್ತಾರಾ ಅಂದ್ರೆ ಅದೂ ಮಾಡೋದಿಲ್ಲ. ಲೂಸ್‌ ಟಾಕ್‌ ಮಾತನಾಡುತ್ತಾ ಅಂದ್ರೆ ಅದೂ ಇಲ್ಲ.. ಮಾಜಿ ಸಿಎಂ ಪುತ್ರ ಎಂದು ಅಧಿಕಾರ ಚಲಾಯಿಸೋಕೆ ಹೋಗುತ್ತಾರಾ ಅಂದ್ರೆ ಅದೂ ಇಲ್ಲ.. ತಾನಾಯಿತು, ತನ್ನ ಕೆಲಸವಾಯ್ತು ಎಂದು ಹೊರಟಿದ್ದೇ ಹೆಚ್ಚು. ಎಂದೂ ಕೂಡಾ ಅವರು ವಿವಾದ ಮಾಡಿಕೊಳ್ಳಲಿಲ್ಲ.. ಭ್ರಷ್ಟಾಚಾರದ ಆರೋಪ ಹೊತ್ತುಕೊಳ್ಳಲಿಲ್ಲ.. ವಿರೋಧ ಪಕ್ಷದ ನಾಯಕರ ವಿಮರ್ಶೆಗೂ ಒಳಪಡಲಿಲ್ಲ.. ಮೊನ್ನೆ ಮೊನ್ನೆಯಷ್ಟೇ ಕಾಂಗ್ರೆಸ್‌ನ ಹಿರಿಯ ನಾಯಕರು ಶಾಮನೂರು ಶಿವಶಂಕರಪ್ಪ ಅವರೇ ಬಿ.ವೈ.ರಾಘವೇಂದ್ರ ಮತ್ತೆ ಬಿಜೆಪಿ ಟಿಕೆಟ್‌ ಕೊಡಬೇಕು. ಅವರೇ ಈ ಬಾರಿಯೂ ಶಿವಮೊಗ್ಗದ ಸಂಸದರಾಗಬೇಕು ಎಂದಿದ್ದರು.. ಹೀಗಾಗಿ, ಬಿ.ವೈ.ರಾಘವೇಂದ್ರ ಸೋಲಬೇಕು ಅನ್ನೋದಕ್ಕೆ ಕಾರಣವೇ ಸಿಗೋದಿಲ್ಲ.. ವಿರೋಧಿಗಳು ಕೂಡಾ ಬೆಟ್ಟು ತೋರಿಸಲಾರರು..

ಗೀತಾ ಶಿವರಾಜ್‌ಕುಮಾರ್‌ ಗೆಲ್ಲಿಸಲಾದರೂ ಕಾರಣ ಇದೆಯಾ..?;

ಗೀತಾ ಶಿವರಾಜ್‌ಕುಮಾರ್‌ ಗೆಲ್ಲಿಸಲಾದರೂ ಕಾರಣ ಇದೆಯಾ..?; ಯಡಿಯೂರಪ್ಪ ಕುಟುಂಬ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಗೀತಾ ರಾಜ್‌ಕುಮಾರ್‌ ಮೂವರನ್ನೂ ಸೋಲಿಸಿದೆ.. ಈ ಸೋಲಿನ ಸೇಡು ತೀರಿಸಿಕೊಳ್ಳಬೇಕೆಂಬ ಹಠ ಸಚಿವ ಮಧು ಬಂಗಾರಪ್ಪ ಅವರದ್ದು… ಇದೊಂದೇ ಕಾರಣ ಅವರಲ್ಲಿರಬಹುದು… ಗೀತಾ ಶಿವರಾಜ್‌ಕುಮಾರ್‌ ಅವರು ಬಂಗಾರಪ್ಪ ಅವರ ಪುತ್ರಿ… ಬಂಗಾರಪ್ಪ ಅವರು ಬಡ ಜನಕ್ಕೆ ವೈಯಕ್ತಿಕವಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ… ಈಗಲೂ ಕೂಡಾ ಕೋಟ್ಯಂತರ ಜನ ಬಂಗಾರಪ್ಪ ಅಭಿಮಾನಿಗಳಿದ್ದಾರೆ.. ಈ ಅಭಿಮಾನಕ್ಕಾಗಿಯೇ ಜನ, ಅವರ ಪುತ್ರರಾದ ಮಧು ಬಂಗಾರಪ್ಪ ಹಾಗೂ ಕುಮಾರ್‌ ಬಂಗಾರಪ್ಪ ಅವರನ್ನು ಹಲವು ಬಾರಿ ಗೆಲ್ಲಿಸಿದ್ದಾರೆ. ಇಬ್ಬರನ್ನೂ ಮಂತ್ರಿಗಳಾಗುವ ಮಟ್ಟಕ್ಕೆ ಬೆಳೆಸಿದ್ದಾರೆ… ಬಂಗಾರಪ್ಪ ಅವರ ಮಕ್ಕಳು ಅನ್ನೋ ಕಾರಣಕ್ಕಾಗಿ ಜನ ಇನ್ನೂ ಏನು ಮಾಡಬೇಕಿದೆ..?. ಬಿ.ವೈ.ರಾಘವೇಂದ್ರ ಅವರು ಮೊದಲ  ಬಾರಿ ಮಾತ್ರ ಯಡಿಯೂರಪ್ಪ ಮಗನಾಗಿ ಗೆದ್ದಿದ್ದರು. ಅನಂತರ ತನ್ನದೇ ಆದ ಇಮೇಜ್‌ ಬೆಳೆಸಿಕೊಂಡಿದ್ದಾರೆ.. ಏನು ಮಾಡಿದ್ದೀರಿ ಎಂದು ಕೇಳಿದರೆ ತೋರಿಸೋದಕ್ಕೆ ಒಂದಷ್ಟು ಕೆಲಸಗಳೂ ಇವೆ.. ಆದ್ರೆ, ಈಗ ರಾಘವೇಂದ್ರರನ್ನು ಸೋಲಿಸಿ, ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಗೆಲ್ಲಿಸೋದಕ್ಕೆ ತೋರಿಸುವ ಕಾರಣ ಮಾತ್ರ ಒಂದೇ.. ಈ ಹಿಂದಿನ ಸೋಲುಗಳಿಗೆ ಸೇಡು ತೀರಿಸಿಕೊಳ್ಳೋದು..

ಈಡಿಗ ಹಾಗೂ ಲಿಂಗಾಯತ ಮತಗಳು ಪ್ರಾಬಲ್ಯ;

ಈಡಿಗ ಹಾಗೂ ಲಿಂಗಾಯತ ಮತಗಳು ಪ್ರಾಬಲ್ಯ; ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈಡಿಗ ಹಾಗೂ ಲಿಂಗಾಯತ ಮತಗಳು ಹೆಚ್ಚಿವೆ. ಇದರ ಜೊತೆಗೆ ಹಿಂದುಳಿದ ಹಾಗೂ ದಲಿತ ಮತಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇಲ್ಲಿ ಜಾತಿ ರಾಜಕಾರಣ ಸಾಕಷ್ಟು ಕೆಲಸ ಮಾಡುತ್ತದೆ.. ಇನ್ನು ಮಧು ಬಂಗಾರಪ್ಪ ಅವರು ಸಚಿವರಾಗಿದ್ದಾರೆ.. ಹೇಗಾದರೂ ಮಾಡಿ, ಯಡಿಯೂರಪ್ಪ ಪುತ್ರನನ್ನು ಸೋಲಿಸಬೇಕೆಂದು ಕಂಕಣ ತೊಟ್ಟಿದ್ದಾರೆ.. ಒಮ್ಮೊಮ್ಮೆ ಕಾರಣವೇ ಇಲ್ಲದೇ ಹಲವರು ಸೋತ ಉದಾಹರಣೆ ಇದೆ… ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬದಲ್ಲಿ ಕುಮಾರ್‌ ಬಂಗಾರಪ್ಪ ಸೋಲೋದಕ್ಕೆ ಕಾರಣಗಳು ತುಂಬಾ ಕಡಿಮೆ ಇದ್ದರು.. ಕುಮಾರ್‌ ಬಂಗಾರಪ್ಪ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಮಧು ಬಂಗಾರಪ್ಪ ಅವರಿಗೆ ಜನ ಮಣೆ ಹಾಕಿದ್ದರು.. ಇಂತಹ ಘಟನೆ ಆಗಾಗ ಮರುಕಳಿಸುತ್ತಲೂ ಇರುತ್ತವೆ… ಹೀಗಾಗಿಯೇ, ರಾಘವೇಂದ್ರ ಅವರನ್ನು ಸೋಲಿಸೋದಕ್ಕೆ ಹಾಗೂ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಗೆಲ್ಲಿಸೋದಕ್ಕೆ ಕಾರಣಗಳು ಇಲ್ಲದೇ ಇದ್ದರೂ ಕೂಡಾ ಶಿವಮೊಗ್ಗ ಚುನಾವಣಾ ಕಣ ಜಿದ್ದಾಜಿದ್ದಿಗೆ ಕಾರಣವಾಗಲಿದೆ…

ಈಡಿಗ, ಮುಸ್ಲಿಂ, ಬಂಜಾರ, ಕುರುಬ, ದಲಿತರು ಒಂದಾದರೆ ಫೈಟ್‌;

ಈಡಿಗ, ಮುಸ್ಲಿಂ, ಬಂಜಾರ, ದಲಿತರು ಒಂದಾದರೆ ಫೈಟ್‌; ಸದ್ಯದ ಪರಿಸ್ಥಿತಿಯಲ್ಲಿ ಶಿವಮೊಗ್ಗದಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಬಲವಿದೆ.. ಆದ್ರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನದಲ್ಲಿ ಗೆದ್ದಿದ್ದರೂ, ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ.. ಒಂದು ವೇಳೆ ಬಿಜೆಪಿಯ ರಾಘವೇಂದ್ರ ಬಿಗ್‌ ಫೈಟ್‌ ಕೊಡಬೇಕಾದರೆ, ಶಿವಮೊಗ್ಗ ನಗರ, ತೀರ್ಥಹಳ್ಳಿ ಮುಂತಾದ ಕಡೆ ಕೊಂಚ ಪ್ರಾಬಲ್ಯವಿರುವ ಮುಸ್ಲಿಂ ಮತಗಳು, ಶಿಕಾರಿಪುರದ ಸುತ್ತಮುತ್ತ ಪ್ರಾಬಲ್ಯವಿರುವ ಬಂಜಾರ ಮತಗಳು, ಸೊರಬ, ಸಾಗರದಲ್ಲಿ ದೊಡ್ಡ ಮಟ್ಟದಲ್ಲಿರುವ ಈಡಿಗ ಮತಗಳು, ಕುರುಬ ಮತಗಳು ಹಾಗೂ ದಲಿತ ಮತಗಳು ಒಂದಾಗಬೇಕು. ಹಾಗಾದರೆ ಮಾತ್ರ ಗೀತಾ ಶಿವರಾಜ್‌ಕುಮಾರ್‌ ಹಾಗೂ ರಾಘವೇಂದ್ರ ನಡುವೆ ನೆಕ್‌ ಟು ನೆಕ್‌ ಫೈಟ್‌ ಕಾಣಬಹುದು ಎಂದು ಹೇಳಲಾಗುತ್ತದೆ.

ಯಡಿಯೂರಪ್ಪಗೆ ಮೊದಲು ಸೋಲುಣಿಸಿದ್ದ ಬಂಗಾರಪ್ಪ;

ಯಡಿಯೂರಪ್ಪಗೆ ಮೊದಲು ಸೋಲುಣಿಸಿದ್ದ ಬಂಗಾರಪ್ಪ; ಮಾಜಿ ಸಿಎಂ ಯಡಿಯೂರಪ್ಪ ಅವರು ಇದುವರೆಗೆ ಒಂದೇ ಒಂದು ಬಾರಿ ಸೋತಿರೋದು.. ಆ ಸೋಲುಣಿಸಿದ್ದು ಕೂಡಾ ಬಂಗಾರಪ್ಪ ಅವರ ಕುಟುಂಬ..  1991ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಿ.ಎಸ್‌.ಯಡಿಯೂರಪ್ಪ ಸ್ಪರ್ಧಿಸಿದ್ದರು. ಈ ವೇಳೆ ಮುಖ್ಯಮಂತ್ರಿಯಾಗಿ ಬಂಗಾರಪ್ಪ ಅವರು, ಯಡಿಯೂರಪ್ಪ ಅವರ ಎದುರಾಳಿಯಾಗಿ, ತಮ್ಮ ಪತ್ನಿಯ ಸಹೋದರಿಯ ಗಂಡ ಕೆ.ಜಿ.ಶಿವಪ್ಪ ಅವರನ್ನು ಅಖಾಡಕ್ಕಿಳಿಸಿದ್ದರು.. ತಾನೇ ಸ್ಪರ್ಧಿಸಿದ್ದೇನೆ ಎಂಬಂತೆ ಬಂಗಾರಪ್ಪ ಓಡಾಡಿದ್ದರು. ಈ ಕಾರಣಕ್ಕಾಗಿ ಯಡಿಯೂರಪ್ಪ 40 ಸಾವಿರ ಮತಗಳ ಅಂತರದಿಂದ ಸೋಲಬೇಕಾಯಿತು. ಅನಂತರ ನಡೆದ ಐದು ಚುನಾವಣೆಗಳಲ್ಲಿ ಬಂಗಾರಪ್ಪ ಅವರ ಕುಟುಂಬವನ್ನು ಯಡಿಯೂರಪ್ಪ ಕುಟುಂಬ ಸೋಲಿಸಿದೆ.

ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಗೀತಾಗೆ ಮೂರನೇ ಸ್ಥಾನ;

ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಗೀತಾಗೆ ಮೂರನೇ ಸ್ಥಾನ;  2013 ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಶಿವಮೊಗ್ಗದಿಂದ ಲೋಕಸಭಾ ಅಖಾಡಕ್ಕಿಳಿದಿದ್ದಾಗ, ಜೆಡಿಎಸ್‌ನಿಂದ ಗೀತಾ ಶಿವರಾಜ್‌ ಕುಮಾರ್‌ ಸ್ಪರ್ಧೆ ಮಾಡಿದ್ದರು. ಗೀತಾ ಪತಿ, ಹ್ಯಾಟ್ರಿಕ್‌ ಹೀರೋ ಶಿವರಾಜಕುಮಾರ್‌ ಕೂಡಾ ಪ್ರಚಾರದ ಅಖಾಡಕ್ಕಿಳಿದಿದ್ದರು. ಆದರೂ ಗೀತಾ ಶಿವರಾಜ್‌ ಕುಮಾರ್‌ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅನಂತರ ಎರಡು ಬಾರಿ ಮಧು ಬಂಗಾರಪ್ಪ ಅವರು ರಾಘವೇಂದ್ರ ವಿರುದ್ಧ ಸೋತರು. ಈ ಹಿಂದೆ ಬಂಗಾರಪ್ಪ ಅವರು ಕೂಡಾ ರಾಘವೇಂದ್ರ ವಿರುದ್ಧ ಸೋತಿದ್ದರು.

2014ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಗೀತಾ ಶಿವರಾಜ್‌ಕುಮಾರ್‌ ಅವರು ಯಡಿಯೂರಪ್ಪ ಅವರ ವಿರುದ್ಧ 3.6 ಲಕ್ಷ ಮತಗಳ ಅಂತರದಿಂದ ಸೋಲುಂಡರು. ಈ ಚುನಾವಣೆಯಲ್ಲಿ ಬಿ.ಎಸ್‌. ಯಡಿಯೂರಪ್ಪ 6.06 ಲಕ್ಷ ಮತ ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಂಜುನಾಥ ಭಂಡಾರಿ ಅವರು 2.42 ಲಕ್ಷ ಮತ ಪಡೆದು ಎರಡನೇ ಸ್ಥಾನ ಗಳಿಸಿದ್ದರು. ಗೀತಾ ಶಿವರಾಜ್‌ಕುಮಾರ್‌ ಗಳಿಸಿದ್ದ ಕೇವಲ 2.40 ಲಕ್ಷ ಮತಗಳು ಮಾತ್ರ.

ಕಳೆದ ಚುನಾವಣೆ ಫಲಿತಾಂಶ ಹೇಗಿತ್ತು..?;

ಕಳೆದ ಚುನಾವಣೆ ಫಲಿತಾಂಶ ಹೇಗಿತ್ತು..?; 2019ರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ನೋಡೋದಾದರೆ, ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 7,29,872 ಮತ ಪಡೆದು ಗೆದ್ದಿದ್ದರು. ಇವರ ಎದುರಾಳಿಯಾಗಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಮಧು ಬಂಗಾರಪ್ಪಕೇವಲ 5,06,512 ಮತಗಳು ಮಾತ್ರ ಪಡೆದಿದ್ದರು. ಆಗ ಕಾಂಗ್ರೆಸ್‌ ಕೂಡಾ ಮಧು ಬಂಗಾರಪ್ಪಗೆ ಬೆಂಬಲ ನೀಡಿತ್ತು. ಇದಕ್ಕೂ ಮೊದಲು ನಡೆದ ಉಪಚುನಾವಣೆಯಲ್ಲಿ ಇದೇ ಮಧು ಬಂಗಾರಪ್ಪ ಕೇವಲ 50 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರಾದರೂ, ರಾಘವೇಂದ್ರ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಸದ್ಯ ಮಧು ಬಂಗಾರಪ್ಪ ಕಾಂಗ್ರೆಸ್‌ ಪಕ್ಷದಲ್ಲಿದ್ದಾರೆ. ಸಚಿವರಾಗಿದ್ದಾರೆ.

ಫಲಿತಾಂಶ ನಿರ್ಧರಿಸೋದು ಕಷ್ಟ;

ಫಲಿತಾಂಶ ನಿರ್ಧರಿಸೋದು ಕಷ್ಟ; ಬಂಗಾರಪ್ಪ ಅವರು ಪ್ರತಿಷ್ಠೆಗಾಗಿ ಪಕ್ಷಗಳನ್ನು ಬದಲಿಸಿದಾಗ ಅವರ ಕೈಹಿಡಿದವರು ಶಿವಮೊಗ್ಗದ ಜನ… ಅವರು ವಿನಾಕರಣ ರಾಜೀನಾಮೆ ನೀಡಿ ಬಂದು ಯಾವುದೋ ಪಕ್ಷದಿಂದ ಅಖಾಡಕ್ಕಿಳಿದರೂ ಜನ ಬಂಗಾರಪ್ಪ ಅವರಿಗೆ ಮತ ನೀಡುತ್ತಿದ್ದರು.. ಹೀಗಾಗಿ ಶಿವಮೊಗ್ಗದ ಜನ ಹೇಗೆ ಬದಲಾಗುತ್ತಾರೆ, ಯಾವ ಸಮಯದಲ್ಲಿ ಯಾವ ವಿಷಯಕ್ಕೆ ಮಹತ್ವ ಕೊಡುತ್ತಾರೆ ಎಂದು ಹೇಳೋದಕ್ಕೆ ಆಗೋದಿಲ್ಲ.. ಹೀಗಾಗಿ ಇಬ್ಬರು ಮಾಜಿ ಸಿಎಂಗಳ ಕುಡಿಗಳ ನಡುವಿನ ಈ ಸಮರ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರೋದಂತೂ ಸತ್ಯ..

Share Post