Politics

ಹಿಂದೂ ದೇವಾಲಯಗಳಿಗೆ ಅನ್ಯಾಯ ಮಾಡಿದ ಕಾಂಗ್ರೆಸ್‌; ಆರ್‌.ಅಶೋಕ್

ಬೆಂಗಳೂರು; ಹಿಂದೂ ದೇವಾಲಯ, ಧಾರ್ಮಿಕ ಸಂಸ್ಥೆಗಳಿಗೆ ಕಾಂಗ್ರೆಸ್‌ ಸರ್ಕಾರ ಬಹಳ ಅನ್ಯಾಯ ಮಾಡಿದೆ. ಹಾಗೆಯೇ ಪ್ರತಿ ಇಲಾಖೆಗಳಲ್ಲಿ ಅಭಿವೃದ್ಧಿಗಾಗಿ ಹಣ ಖರ್ಚಾಗದೆ ಬಾಕಿ ಉಳಿದಿದೆ. ಸಿಎಂ ಸಿದ್ದರಾಮಯ್ಯನವರ 15 ನೇ ಬಜೆಟ್‌ ಒಡೆದ ಕನ್ನಡಿಯಂತಿದೆ, ಬಡವರ ವಿರೋಧಿಯಾಗಿದೆ, ಹಿಂದೂಗಳಿಗೆ ದ್ರೋಹ ಬಗೆದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್‌ ಸರ್ಕಾರದಿಂದ ದೇವಾಲಯಗಳಿಗೂ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರವಿದ್ದಾಗ ದೇವಾಲಯ ಮತ್ತು ಧಾರ್ಮಿಕ ಸಂಸ್ಥೆಗಳಿಗೆ 274 ಕೋಟಿ ರೂ. ಖರ್ಚು ಮಾಡಲಾಗಿತ್ತು. ಜೊತೆಗೆ ಸಿಎಂ ವಿಶೇಷ ಅನುದಾನದಡಿ, ಮಠ ಹಾಗೂ ದೇವಾಲಯಗಳಿಗೆ 2022-23 ರಲ್ಲಿ 154.80 ಕೋಟಿ ರೂ. ಖರ್ಚು ಮಾಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಕೇವಲ 17 ಕೋಟಿ ರೂ. ಮೀಸಲಿಟ್ಟಿದ್ದು, ಸುಮಾರು 90% ಅನುದಾನ ಕಡಿತವಾಗಿದೆ. ಇದೇ ಕಾಂಗ್ರೆಸ್‌ ನಾಯಕರು ತೋರುವ ಪ್ರೀತಿ. ಅದೇ ವಕ್ಫ್‌ ಮಂಡಳಿಗೆ 100 ಕೋಟಿ ರೂ. ಅನುದಾನ ನೀಡಲಾಗಿದೆ. ಒಬ್ಬರು ರಾಮ ನನ್ನ ಹೆಸರಿನಲ್ಲಿದೆ ಎಂದರೆ, ಮತ್ತೊಬ್ಬರು ಶಿವ ನನ್ನ ಹೆಸರಲ್ಲಿದೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

 

ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ 24.7 ಕೋಟಿ ರೂ. ಖರ್ಚು ಮಾಡಿದ್ದು, ಈಗಿನ ಸರ್ಕಾರ 10 ಕೋಟಿ ರೂ. ಮೀಸಲಿಟ್ಟಿದೆ ಎಂದು ದೂರಿದರು.

 

ದೇವಸ್ಥಾನಗಳ ಆಸ್ತಿ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿದ್ದು, ಅದನ್ನು ನಿರ್ವಹಿಸಲು ಹೆಚ್ಚು ಅನುದಾನ ಬೇಕಾಗುತ್ತದೆ. ನಾನು ಸಾರಿಗೆ ಸಚಿವನಾಗಿದ್ದಾಗ *1,200 ಎಕರೆ ಸರ್ಕಾರಿ ಜಮೀನನ್ನು ಹರಾಜು ಹಾಕುವುದನ್ನು ತಪ್ಪಿಸಿ* ಸಾರಿಗೆ ಇಲಾಖೆಗೆ ಕೊಡಲು ಕ್ರಮ ವಹಿಸಿ ಯಶಸ್ವಿಯಾಗಿದ್ದೆ. ಈ ರೀತಿ ಸರ್ಕಾರಿ ಜಮೀನನ್ನು ಉಳಿಸಲು ಕ್ರಮ ವಹಿಸಿ ಎಂದು ಕಿವಿಮಾತು ಹೇಳಿದರು.

ತೆರಿಗೆ ಸಂಗ್ರಹ ಇಳಿಕೆ

2023-24 ರಲ್ಲಿ ತೆರಿಗೆ ಸಂಗ್ರಹದ ಗುರಿ 1,75,653 ಕೋಟಿ ರೂ. ಇದ್ದು, 1,61,494 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಗುರಿಗಿಂತ *14,159 ಕೋಟಿ ರೂ. ಸಂಗ್ರಹ ಕಡಿಮೆಯಾಗಿದೆ.* ಇದು ಕಾಂಗ್ರೆಸ್‌ ಸರ್ಕಾರದ ವೈಫಲ್ಯ. 2024-25 ರಲ್ಲಿ ತೆರಿಗೆ ಸಂಗ್ರಹದ ಗುರಿ 1,89,893 ಕೋಟಿ ರೂ. ಇದ್ದು, ಕಳೆದ ಬಾರಿಗಿಂತ 28,399 ಕೋಟಿ ರೂ. ಅಧಿಕ ಗುರಿ ನೀಡಲಾಗಿದೆ. ಕಳೆದ ವರ್ಷದ್ದೇ ಗುರಿ ಈಡೇರಿಸಲಾಗದೆ ಈ ಬಾರಿ ಹೆಚ್ಚು ಗುರಿ ನೀಡಲಾಗಿದೆ. ಕೋವಿಡ್‌ ಬಂದಾಗ ಬಿಜೆಪಿ ಸರ್ಕಾರ ಆಸ್ತಿ ನೋಂದಣಿ ದರವನ್ನು ಶೇ.10 ರಷ್ಟು ಇಳಿಕೆ ಮಾಡಲಾಯಿತು. ಇದರಿಂದಾಗಿ ಗುರಿಗಿಂತ ಹೆಚ್ಚು ತೆರಿಗೆ ಸಂಗ್ರಹ ಸಾಧ್ಯವಾಯಿತು. ಈ ರೀತಿ ಸರ್ಕಾರ ತೆರಿಗೆ ಹೆಚ್ಚು ಬರಲು ಯಾವುದೇ ಕ್ರಮ ವಹಿಸಿಲ್ಲ. ಇದರಿಂದ ಈ ಬಾರಿಯೂ 10-12 ಸಾವಿರ ಕೋಟಿ ರೂ. ಕಡಿಮೆಯಾಗಲಿದ್ದು, ಮತ್ತೆ ಸಾಲ ಮಾಡುವ ಸಂಭವವಿದೆ ಎಂದು ದೂರಿದರು.

2022-23 ರಲ್ಲಿ ಬಜೆಟ್‌ ಗಾತ್ರ 2,89,653 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 57,348 ಕೋಟಿ ರೂ. ಇತ್ತು. 2023-24 ರಲ್ಲಿ ಬಜೆಟ್‌ ಗಾತ್ರ 3,27,747 ಕೋಟಿ ರೂ. ಹಾಗೂ ಬಂಡವಾಳ ವೆಚ್ಚ 51,231 ಕೋಟಿ ರೂ. ಆಗಿತ್ತು. 2024-25 ರಲ್ಲಿ ಬಜೆಟ್‌ ಗಾತ್ರ 3,71,383 ಕೋಟಿ ರೂ. ಆಗಿದ್ದು, ಬಂಡವಾಳ ವೆಚ್ಚ 52,903 ಕೋಟಿ ರೂ. ಆಗಿದೆ. ಅಂದರೆ *ಬಂಡವಾಳ ವೆಚ್ಚ ಶೇ.6 ರಷ್ಟು ಕಡಿಮೆಯಾಗಿದೆ.* ಇದು ಒಂದು ರೀತಿಯಲ್ಲಿ ಪ್ರಪಾತಕ್ಕೆ ಹೋಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Share Post