Politics

ನಾರಾಯಣ ಗುರುಗಳ ಸ್ತಬ್ಧಚಿತ್ರ : ಸಿದ್ದರಾಮಯ್ಯ ಮೇಲೆ ಪ್ರತಾಪ್‌ ಸಿಂಹ ಕಿಡಿ

ಮೈಸೂರು : ಸಂಸದ ಪ್ರತಾಪ್‌ ಸಿಂಹ ವಿಪಕ್ಷ ನಾಯಕ ಸಿದ್ದರಾಮಯ್ಯನ ವಿರುದ್ಧ ಕಿಡಿ ಕಾರಿದ್ದಾರೆ. ಅಧಿಕಾರ ಹೋದ ಬಳಿಕ ಸಿದ್ದರಾಮಯ್ಯ ಅವರಿಗೆ ಮಹನೀಯರು ನೆನಪಾಗುತ್ತಾರೆ ಎಂದು ಪ್ರತಾಪ್‌ ಸಿಂಹ ಹೇಳಿದ್ದಾರೆ.

ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಅವಕಾಶ ಸಿಗದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಸಿದ್ದರಾಮಯ್ಯನವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಪ್ರತಾಪ್‌ ಸಿಂಹ ಸಿದ್ದರಾಮಯ್ಯನವರ ಮೇಲೆ ಕಿಡಿ ಕಾರಿದ್ದಾರೆ.

ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಅನ್ನೋ ಹಾಗೆ ಸಿದ್ದರಾಮಯ್ಯನವರಿಗೆ ಎಲ್ಲದಕ್ಕೂ ಆಕ್ಷೇಪ ಇದೆ. ಕ್ಯಾಂಟೀನ್‌ಗೆ ಇಂದಿರಾ ಕ್ಯಾಂಟೀನ್‌ ಎಂದು ಹೆಸರಿಡುವಾಗ ಯಾಕೆ ಅವರಿಗೆ ಈ ನೆಲದ ಮಹಾಪುರುಷರ ಹೆಸರು ನೆನಪಾಗಲಿಲ್ಲ ?

ಅಧಿಕಾರದಲ್ಲಿ ಇದ್ದಾಗ ನಾರಾಯಣ ಗುರುಗಳು, ಒನಕೆ ಓಬವ್ವ, ಮೈಸೂರು ಮಹಾರಾಜರು  ಅವರಿಗೆ  ನೆನಪಾಗೊಲ್ಲ, ಅದೇ ಅಧಿಕಾರ ಹೋದ ಮೇಲೆ ಮಹನೀಯರು ನೆನಪಾಗ್ತಾರೆ ಎಂದು ಸಿದ್ದರಾಮಯ್ಯನವರನ್ನು ಟೀಕಿಸಿದ್ದಾರೆ.  ಭೂತದ ಬಾಯಲ್ಲಿ ಭಗವದ್ಗಿತೆ ಎಂಬಂತೆ ಮಹನೀಯರಿಗೆ ಗೌರವ ಕೊಡುವುದನ್ನು ನಮಗೆ ಹೇಳುತ್ತಿದ್ದಾರೆ ಎಂದು ಪ್ರತಾಪ್‌ ಸಿಂಹ ಗರಂ ಆದರು.

ಗಣರಾಜ್ಯೋತ್ಸವದಲ್ಲಿ ಒಂದು ವಿಷಯ ಕೊಡ್ತಾರೆ. ಅದಕ್ಕೆ ಅನುಗುಣವಾಗಿ ಯಾರು ಸ್ತಬ್ಧಚಿತ್ರ ಮಾಡಿರುತ್ತಾರೋ ಗುಣಮಟ್ಟದ ಆಧಾರದ ಮೇಲೆ ಅದು ಆಯ್ಕೆಯಾಗುವುದು. ಸಿದ್ದರಾಮಯ್ಯನವರು ಮೊದಲು ಗಣರಾಜ್ಯೋತ್ಸವದ ಮಾರಗಸೂಚಿಗಳನ್ನು ಮೊದಲು ಓದಿಕೊಳ್ಳಲಿ ಎಂದು ಹೇಳಿದ್ದಾರೆ.

Share Post