ಲೋಕಸಭೆ ಫಲಿತಾಂಶದ ಮೇಲೆ ಸಚಿವರ ಭವಿಷ್ಯ; ಉಳಿಯುತ್ತಾ ಸಿಎಂ ಸಿದ್ದರಾಮಯ್ಯ ಸ್ಥಾನ..?
ಬೆಂಗಳೂರು; ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಗಿದಿದೆ.. ಎಲ್ಲರೂ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.. ಇನ್ನೇನು ಎರಡು ವಾರಗಳಲ್ಲಿ ಅಂದರೆ ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ.. ಫಲಿತಾಂಶದ ಏನೇ ಆದರೂ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚೇನೂ ಪ್ರಭಾವ ಬೀರೋದಿಲ್ಲ ಎಂದೇ ಎಲ್ಲರೂ ಹೇಳುತ್ತಿದ್ದಾರೆ.. ಆದ್ರೆ ರಾಜ್ಯದ 28 ಕ್ಷೇತ್ರಗಳ ಫಲಿತಾಂಶ ಯಾವ ರೀತಿ ಬರುತ್ತೆ ಎಂಬುದರ ಆಧಾರದ ಮೇಲೆ ರಾಜ್ಯ ಸರ್ಕಾರದಲ್ಲಿ ಬದಲಾವಣೆಗಳಾಗುತ್ತವೆ ಎಂದು ಹೇಳಲಾಗುತ್ತಿದೆ.. ಈ ಬಾರಿ ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಕಾಂಗ್ರೆಸ್ ಪಕ್ಷ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದೆ.. ಅದಕ್ಕಾಗಿಯೇ ಕಾಂಗ್ರೆಸ್ ಹೈಕಮಾಂಡ್ ಸಚಿವರಿಗೆ ಗೆಲ್ಲುವ ಟಾಸ್ಕ್ ನೀಡಿತ್ತು.. ಸಚಿವರ ಮಕ್ಕಳು, ಸಂಬಂಧಿಕರೇ ಹೆಚ್ಚು ಟಿಕೆಟ್ ನೀಡಲಾಗಿತ್ತು.. ಈಗ ಮತದಾನ ಮುಗಿದಿದೆ.. ಫಲಿತಾಂಶ ಬಂದಾಗ ಗೆಲ್ಲದೇ ಹೋದರೆ, ಟಾಸ್ಕ್ ಸೋತ ಸಚಿವರ ಸೀಟಿಗೆ ಕಂಟಕ ಇದೆ ಎಂದು ಹೇಳಲಾಗುತ್ತಿದೆ…
ಲೋಕಸಭಾ ಚುನಾವಣೆಯ ಫಲಿತಾಂಶದ ದಿನಾಂಕ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಪುಟ ಸರ್ಜರಿಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ.. ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಬರಲಿದೆ ಎಂಬುದರ ಆಧಾರದ ಮೇಲೆ ಸಂಪುಟಕ್ಕೆ ಸರ್ಜರಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.. ಕಾಂಗ್ರೆಸ್ ಹೈಕಮಾಂಡ್, ಹತ್ತಕ್ಕೂ ಹೆಚ್ಚು ಸಚಿವರನ್ನೇ ಲೋಕಸಭಾ ಅಖಾಡಕ್ಕೆ ಇಳಿಸಲು ನಿರ್ಧಾರ ಮಾಡಿತ್ತು.. ಆದ್ರೆ, ಸಚಿವರು ನೇರವಾಗಿ ಚುನಾವಣಾ ಕಣಕ್ಕೆ ಇಳಿಯಲು ಒಪ್ಪಿರಲಿಲ್ಲ.. ಅದರ ಬದಲಾಗಿ ನಾವು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇವೆ.. ಅದರ ಜವಾಬ್ದಾರಿ ನಮಗೆ ಬಿಡಿ ಎಂದು ಹೇಳಿದ್ದರು.. ಹೀಗಾಗಿ ಜವಾಬ್ದಾರಿಯನ್ನು ಸಚಿವರಿಗೆ ಬಿಟ್ಟುಕೊಟ್ಟ ಕಾಂಗ್ರೆಸ್ ಹೈಕಮಾಂಡ್, ಬಹುತೇಕ ಕ್ಷೇತ್ರಗಳನ್ನು ಸಚಿವರ ಮಕ್ಕಳು, ಸಂಬಂಧಿಕರಿಗೆ ಬಿಟ್ಟುಕೊಟ್ಟಿತ್ತು.. ಸಚಿವರು ಕೂಡಾ ಮಾಡು ಇಲ್ಲವೆ ಮಡಿ ಎಂಬಂತೆ ಕೆಲಸ ಮಾಡಿದ್ದರು.. ಈಗ ಸೋಲು, ಗೆಲುವಿನ ಲೆಕ್ಕಾಚಾರ ಶುರುವಾಗಿದೆ.. ಬಹುತೇಕ ಕಾಂಗ್ರೆಸ್ ನಾಯಕರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 12ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ..
ಕರ್ನಾಟಕದಲ್ಲಿ 1999ರಿಂದೀಚೆಗೆ ಕಾಂಗ್ರೆಸ್ ಪಕ್ಷ ಒಂದಂಕಿ ದಾಟಿಲ್ಲ.. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗಳಿಸಿತ್ತು… ಆದ್ರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.. ಜೊತೆಗೆ ಐದು ಗ್ಯಾರೆಂಟಿಗಳನ್ನು ಕೂಡಾ ಜಾರಿ ಮಾಡಲಾಗಿದೆ.. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕನಿಷ್ಠ 20 ಸ್ಥಾನಗಳನ್ನು ಗೆದ್ದುಕೊಂಡು ಬರುವಂತೆ ಟಾಸ್ಕ್ ಕೊಟ್ಟಿದೆ.. ಆದ್ರೆ, ಸದ್ಯದ ಮಾಹಿತಿ ಪ್ರಕಾರ 20 ಸ್ಥಾನ ಗೆಲ್ಲೋದು ಕಷ್ಟವೇ.. ಕಾಂಗ್ರೆಸ್ ನಾಯಕರೇ 10 ರಿಂದ 12 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.. ಎರಡಂಕಿ ದಾಟಿದರೆ ಸಿದ್ದರಾಮಯ್ಯ ಸಂಪುಟದ ಮೇಲೆ ಅಷ್ಟೇನೂ ಪರಿಣಾಮ ಬೀರುವುದಿಲ್ಲ.. ಒಂದೆರಡು ಸಚಿವರ ಬದಲಾವಣೆ ಮಾಡಬಹುದು ಅಷ್ಟೇ.. ಆದ್ರೆ ಒಂದಂಕಿಯ ಫಲಿತಾಂಶ ಬಂದರಂತೂ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ ಎಂದೇ ಹೇಳಲಾಗುತ್ತಿದೆ.. ಹೀಗಾಗಿ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಈ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.. ಹಲವರು ಅದಕ್ಷ ಸಚಿವರಿಗೆ ಗೇಟ್ ಪಾಸ್ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸಚಿವಾಕಾಂಕ್ಷಿಗಳು ಈಗಾಗಲೇ ಅಲರ್ಟ್ ಆಗಿದ್ದಾರೆ.. ಆಗಲೇ ಒಳಗೊಳಗೇ ಲಾಬಿ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ..
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 10 ಸ್ಥಾನಕ್ಕಿಂತ ಹೆಚ್ಚು ಫಲಿತಾಂಶ ಬಂದರೆ ಸಣ್ಣ ಪ್ರಮಾಣದಲ್ಲಿ ಸಂಪುಟ ಸರ್ಜರಿಯಾಗಬಹುದು. ಆಗ ಅಸಮರ್ಥ ಅಥವಾ ಅದಕ್ಷ ಸಚಿವರನ್ನು ಮಾತ್ರ ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಬಹುದು. ಒಂದು ವೇಳೆ ಕಾಂಗ್ರೆಸ್‌ಗೆ 10ಕ್ಕಿಂತ ಕಡಿಮೆ ಸ್ಥಾನಗಳು ಬಂದರೆ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.. ಮಕ್ಕಳು, ಕುಟುಂಬ ಸದಸ್ಯರನ್ನು ಸ್ಪರ್ಧೆಗಿಳಿಸಿದ ಸಚಿವರಿಗೆ ಇದರ ನೇರ ಬಿಸಿ ತಟ್ಟಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಸೋತರೆ ಸಿಎಂ ಸ್ಥಾನಕ್ಕೂ ಕಂಟಕ ಏರ್ಪಟ್ಟರೂ ಅಚ್ಚರಿ ಇಲ್ಲ ಎಂಬ ಮಾತುಗಳು ಕೂಡಾ ಅಲ್ಲಲ್ಲಿ ಕೇಳಿಬರುತ್ತಿವೆ..