BengaluruPolitics

ಬಿಜೆಪಿಯ ಹೆಚ್ಚಿನವರು ಕಾಂಗ್ರೆಸ್‌ ಸೇರಲು ಆಸಕ್ತಿ ತೋರಿಸುತ್ತಿರೋದು ಯಾಕೆ..?

ಬೆಂಗಳೂರು; ಕರ್ನಾಟಕದಲ್ಲಿ ಆಪರೇಷನ್‌ಗೆ ನಾಂದಿ ಹಾಡಿದ್ದು, ರೆಸಾರ್ಟ್‌ ರಾಜಕೀಯ ಮಾಡಿದ್ದು, ಯಶಸ್ವಿಯಾಗಿ ಬೇರೆ ಪಕ್ಷಗಳಿಂದ ಶಾಸಕರನ್ನು ಸೆಳೆದಿದ್ದು ಬಿಜೆಪಿಯೇ. ಈಗ ಅದೇ ಆಪರೇಷನ್‌ ಬಿಜೆಪಿಗೆ ತಿರುಗುಬಾಣವಾಗುತ್ತಿದೆಯಾ..? ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಪರೇಷನ್‌ ಹಸ್ತದ ಸದ್ದು ಕರ್ನಾಟಕದಲ್ಲಿ ಜೋರಾಗಿ ಕೇಳಿಸುತ್ತಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಗೆದ್ದಿದ್ದು ಕೇವಲ ಒಂದು ಸ್ಥಾನ. ಆದ್ರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಐದು ಉಚಿತ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಕಾಂಗ್ರೆಸ್‌ಗೆ ಬಿಜೆಪಿಗಿಂತ ಉತ್ತಮ ವಾತಾರಣವಿದೆ. ಹೀಗಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಹಿಂದಿನ ಕೆಲ ಚುನಾವಣೆಗಳ ಫಲಿತಾಂಶ ನೋಡಿದರೆ, ಜನ ಬಿಜೆಪಿ ಕೈಹಿಡಿಯುವ ಸಾಧ್ಯತೆಯೇ ಹೆಚ್ಚಿದೆ. ಕಳೆದ ಚುನಾವಣೆಯಲ್ಲಿ ಗೆದ್ದಷ್ಟು ಬಿಜೆಪಿ ಗೆಲ್ಲದಿದ್ದರೂ, ಕಾಂಗ್ರೆಸ್‌ಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದೇ ಹೇಳಲಾಗುತ್ತಿದೆ.

ಈ ನಡುವೆ ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಟಾಸ್ಕ್‌ ಕೊಟ್ಟಿದೆ. ಅಟ್‌ಲಿಸ್ಟ್‌ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಂಡು ಬರಬೇಕೆಂದು ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಟಾರ್ಗೆಟ್‌ ನೀಡಿದ್ದಾರೆ. ಹೀಗಾಗಿ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ರಾಜ್ಯದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸಿಕೊಂಡು ಬರೋದಕ್ಕೆ ಮೆಗಾ ಪ್ಲ್ಯಾನ್‌ ರೆಡಿ ಮಾಡಿಕೊಂಡು ಕೂತಿದ್ದಾರೆ.

ಬಿಜೆಪಿ ರಾಜ್ಯದಲ್ಲಿ ಎರಡು ಮೂರು ಬಾರಿ ಆಪರೇಷನ್‌ ಕಮಲ ಮಾಡಿತ್ತು. ಈಗ ಕಾಂಗ್ರೆಸ್‌ ಕೂಡಾ ಅದೇ ಹಾದಿ ತುಳಿದಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಹಲವು ಹಿರಿಯರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿತ್ತು. ಎಪ್ಪತ್ತಕ್ಕೂ ಹೆಚ್ಚು ಹೊಸಬರಿಗೆ ಟಿಕೆಟ್‌ ನೀಡಿತ್ತು. ಇದೀಗ ಟಿಕೆಟ್‌ ಸಿಗದ ಹಿರಿಯರೆಲ್ಲಾ ಅಸಮಾಧಾನ ಹೊರಹಾಕುತ್ತಿದ್ದಾರೆ. ನಮ್ಮನ್ನು ಮೂಲೆಗುಂಪು ಮಾಡಿದ ಬಿಜೆಪಿ ನಮಗೆ ಬೇಡ ಎಂಬ ಮನಸ್ಥಿತಿ ಬಂದಿದ್ದಾರೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುವುದರಿಂದ ಕಾಂಗ್ರೆಸ್‌ ಸೇರಿದರೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಹಲವು ಮಾಜಿ ಶಾಸಕರು, ಹಾಲಿ ಶಾಸಕರು ಕಾಂಗ್ರೆಸ್‌ ಸೇರೋದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

ಇತ್ತ ಡಿ.ಕೆ.ಶಿವಕುಮಾರ್‌ ಕೂಡಾ ಯಾರು ಕಾಂಗ್ರೆಸ್‌ಗೆ ಬಂದರೆ ಅನುಕೂಲವಾಗುತ್ತೆ ಎಂಬ ಲೆಕ್ಕಾಚಾರದಲ್ಲಿ ಹಲವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನ ಕೊಡುತ್ತಿದ್ದಾರೆ. ಫೋನ್‌ನಲ್ಲಿ ಕೂಡಾ ಸದಾ ಸಂಪರ್ಕದಲ್ಲಿದ್ದಾರೆ. ಈಗಾಗಲೇ ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್‌ ಅವರು ಕಾಂಗ್ರೆಸ್‌ ಸೇರಿದ್ದಾರೆ. ಮಾಜಿ ಶಾಸಕ ಸುಕುಮಾರ ಶೆಟ್ಟಿ ಕೂಡಾ ಕಾಂಗ್ರೆಸ್‌ ಸೇರ್ತೀನಿ ಅಂತ ಕನ್ಫರ್ಮ್‌ ಮಾಡಿಬಿಟ್ಟಿದ್ದಾರೆ.

ಇದಲ್ಲದೆ ಶಾಸಕ ಎಸ್‌.ಟಿ.ಸೋಮಶೇಖರ್‌, ಭೈರತಿ ಬಸವರಾಜ್‌ ಅವರನ್ನು ಕೂಡಾ ಡಿ.ಕೆ.ಶಿವಕುಮಾರ್‌ ಭೇಟಿ ಮಾಡಿದ್ದಾರೆ. ಅವರು ಕೂಡಾ ಕಾಂಗ್ರೆಸ್‌ ಸೇರೋದಕ್ಕೆ ಆಸಕ್ತಿ ತೋರಿಸಿದ್ದಾರೆ ಎನ್ನಲಾಗುತ್ತಿದೆ. ಇತ್ತ ಮಾಜಿ ಶಾಸಕಿ ಪೂರ್ಣಿಮಾ ಅವರ ನಿವಾಸಕ್ಕೆ ಡಿ.ಕೆ.ಶಿವಕುಮಾರ್‌ ಭೇಟಿ ನೀಡಿ, ಊಟ ಮಾಡಿ ಬಂದಿದ್ದಾರೆ.

ಹೀಗೆ ದಿನದಿಂದ ದಿನಕ್ಕೆ ಆಪರೇಷನ್‌ ಜೋರಾಗ್ತಿದೆ. ಹಲವಾರು ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರೋದಕ್ಕೆ ರೆಡಿಯಾಗುತ್ತಿದ್ದಾರೆ. ಹಾಗೆ ಬರುವವರನ್ನು ಸೇರಿಸಿಕೊಳ್ಳೋದಕ್ಕೂ ಕಾಂಗ್ರೆಸ್‌ ಬಾಗಿಲು ಓಪನ್‌ ಮಾಡಿಡಲಾಗಿದೆ. ಹೀಗಾಗಿ ಲೋಕಸಭಾ ಚುನಾವಣೆ ಘೋಷಣೆಯಾಗುವಷ್ಟರಲ್ಲಿ ಹಲವಾರು ನಾಯಕರು ಪಕ್ಷಾಂತರವಾಗೋದು ಪಕ್ಕಾ ಎನ್ನಲಾಗ್ತಿದೆ.

 

Share Post