Politics

ಈ ಚುನಾವಣೆ ಬೆಳಗಾವಿ ಜನತೆಯ ಸ್ವಾಭಿಮಾನದ ಪ್ರಶ್ನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

 ಬೆಳಗಾವಿ : ಈ ಚುನಾವಣೆ ಬೆಳಗಾವಿ ಜಿಲ್ಲೆಯ ಜನರ ಸ್ವಾಭಿಮಾನದ ಪ್ರಶ್ನೆ. ಇದು ನಮ್ಮ ನೆಲ ಜಲದ ಹೋರಾಟ ಹಾಗೂ ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂದು ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ  ಮಾತನಾಡಿದ ಸಚಿವರು, ಬೆಳಗಾವಿ ಜನತೆ ಸ್ವಾಭಿಮಾನಿಗಳು, ಈ ಕ್ಷೇತ್ರದ ಮನೆ ಮಗ ಮೃಣಾಲ್ ಹೆಬ್ಬಾಳ್ಕರ್‌ಗೆ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು.

ಸಾಮಾನ್ಯವಾಗಿ ಮಾತನಾಡುವಂತೆ ರಾಜಕೀಯ ಅಂದುಕೊಂಡಷ್ಟು ಸುಲಭವಲ್ಲ. 24 ಗಂಟೆ ಜನರ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕಾಗುತ್ತದೆ. ನಮ್ಮ ಮಕ್ಕಳು ವಿದೇಶದಲ್ಲಿ ಓದಿದ್ದಾರೆ. ವಿದೇಶದಲ್ಲೇ ನೌಕರಿ ಪಡೆದು, ಅಲ್ಲೆ ಉಳಿದುಕೊಳ್ಳಬಹುದಿತ್ತು. ಆದರೆ ನಮ್ಮ ದಾರಿಯಲ್ಲೇ ಬಂದು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಬೆಳಗಾವಿ ಕ್ಷೇತ್ರದ ಅಭ್ಯರ್ಥಿ, ನನ್ನ ಮಗ ಮೃಣಾಲ್ ಹೆಬ್ಬಾಳ್ಕರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಇಬ್ಬರು ವಿದ್ಯಾವಂತರು. ಬುದ್ದಿವಂತರಿದ್ದಾರೆ, ಪ್ರಭುದ್ಧರಿದ್ದಾರೆ ಎಂದು ಹೇಳಿದರು.

ಇಬ್ಬರಿಗೂ ಇನ್ನೂ ಚಿಕ್ಕ ವಯಸ್ಸು ಎನ್ನುವ ವಿರೋಧ ಪಕ್ಷಗಳ ಆಕ್ಷೇಪದ ಕುರಿತು ಸುದ್ದಿಗಾರರಿಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೇಶದ ಗಡಿ ಕಾಯುವ ಸೈನಿಕರನ್ನು ಆಯ್ಕೆ ಮಾಡುವಾಗ 16ನೇ  ವಯಸ್ಸನ್ನು ನಿಗದಿಪಡಿಸಲಾಗಿದೆ. ಅಲ್ಲದೆ, 18ನೇ ವಯಸ್ಸಿಗೆ ಮತದಾನದ ಹಕ್ಕನ್ನು ನೀಡಲಾಗಿದೆ. ನನ್ನ ಮಗನಿಗೆ 31 ವರ್ಷ, ಪ್ರಿಯಾಂಕಾಗೂ 27 ವರ್ಷ ವಯಸ್ಸಾಗಿದೆ.  ಚುನಾವಣೆಗೆ ನಿಲ್ಲಲು ಇಬ್ಬರು ಆರ್ಹರು ಎಂದರು.

ಅಭ್ಯರ್ಥಿ ವಿರುದ್ಧ ಬಿಜೆಪಿಯಲ್ಲೇ ಅಪಸ್ವರ

ನಾವೆಲ್ಲಾ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಅಪಸ್ವರ ಇರುವುದೇ  ಬಿಜೆಪಿಯಲ್ಲಿ. ಈ ಮಾತನ್ನ ಸ್ವತಃ ಬಿಜೆಪಿಯವರೇ ಹೇಳುತ್ತಿದ್ದಾರೆ. ಇದು ಸ್ವಾಭಿಮಾನದ ಪ್ರಶ್ನೆ, ಚುನಾವಣೆಯಲ್ಲಿ ಜನರೇ  ತಕ್ಕ ಉತ್ತರ  ನೀಡಲಿದ್ದಾರೆ ಎಂದು ಸಚಿವರು ಹೇಳಿದರು.

ನಾನು ಪಂಚಮಸಾಲಿ ಹೆಣ್ಣುಮಗಳು

ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬದವರು  ಪಂಚಮಸಾಲಿ ಸಮುದಾಯವರಲ್ಲ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಆರೋಪಕ್ಕೆ ಉತ್ತರಿಸಿದ ಸಚಿವರು, ನನ್ನ ಮೈಯಲ್ಲಿ ಸ್ವಾಭಿಮಾನಿ ಸಂಕೇತ ಕಿತ್ತೂರು ರಾಣಿ ಚೆನ್ನಮ್ಮನ ರಕ್ತ ಹರಿತಾ ಇದೆ. ನನ್ನ ಮಗನ ಮೈಯಲ್ಲಿ ಪಂಚಮಸಾಲಿ ರಕ್ತ  ಹರೀತಿದೆ. ನಾವು ಬಸವಣ್ಣನ ತತ್ವವನ್ನು ಪಾಲಿಸಿಕೊಂಡು ಬಂದಿದ್ದೇವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ  ನಡೆಯುತ್ತಿದ್ದೇವೆ. ಪಂಚಮಸಾಲಿ ಹೋರಾಟದಲ್ಲಿ ನಾನು ಮತ್ತು ನನ್ನ ಕುಟುಂಬದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದೇವೆ ಎಂದು ತಿರುಗೇಟು ನೀಡಿದರು.

Share Post