Politics

Mandya Loksabha; ಮಂಡ್ಯ ಲೋಕಸಭೆಯಲ್ಲಿ ಅಖಾಡಕ್ಕಿಳಿಯೋರು ಯಾರು..?; ಹೆಚ್ಡಿಕೆ ಫಿಕ್ಸಾ..?

ಮಂಡ್ಯ; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಹಾಲಿ ಸಂಸದೆ ಸುಮಲತಾ ಅವರು ಮಂಡ್ಯ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಬಯಸುತ್ತಿದ್ದಾರೆ. ಆದ್ರೆ ಜೆಡಿಎಸ್‌ಗೆ ಈ ಕ್ಷೇತ್ರ ಬಿಟ್ಟುಕೊಡೋದು ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಜೆಡಿಎಸ್‌ನಿಂದ ಯಾರು ಸ್ಪರ್ಧೆ ಮಾಡುತ್ತಾರೆ ಅನ್ನೋದು ಕುತೂಹಲದ ವಿಚಾರ. ಕಳೆದ ಬಾರಿ ಸೋಲನುಭವಿಸಿದ್ದ ನಿಖಿಲ್‌ ಕುಮಾರಸ್ವಾಮಿ ಅಥವಾ ಕುಮಾರಸ್ವಾಮಿ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಇದರ ನಡುವೆ ನಿಖಿಲ್‌ ಕುಮಾರಸ್ವಾಮಿ ಕಳೆದ ಕೆಲ ದಿನಗಳಿಂದ ಕ್ಷೇತ್ರ ಸಂಚಾರ ನಡೆಸುತ್ತಿದ್ದಾರೆ. ಹೀಗಾಗಿ ಅವರೇ ಸ್ಪರ್ಧೆ ಮಾಡುತ್ತಾರೆ ಎನ್ನಲಾಗ್ತಿತ್ತು. ಆದ್ರೆ ಅದಕ್ಕೆ ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ. ಹೀಗಾಗಿ ಕುಮಾರಸ್ವಾಮಿಯವರೇ ಸ್ಪರ್ಧೆ ಮಾಡಬಹುದು ಎನ್ನಲಾಗ್ತಿದೆ.

ಪಾಂಡವಪುರದಲ್ಲಿ ಕ್ಲಾರಿಟಿ ಕೊಟ್ಟ ನಿಖಿಲ್‌ ಕುಮಾರಸ್ವಾಮಿ;

ಕೆಲವು ದಿನಗಳಿಂದ ನಿಖಿಲ್‌ ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ. ಜೆಡಿಎಸ್‌ ಮುಖಂಡರನ್ನು ಭೇಟಿಯಾಗುತ್ತಿದ್ದಾರೆ. ಹೀಗಾಗಿ ಅವರೇ ಸ್ಪರ್ಧೆ ಮಾಡುತ್ತಾರೆ ಎಂದು ಸುದ್ದಿಯಾಗಿತ್ತು. ಆದ್ರೆ ಅವರೇ ಈಗ ಕ್ಲಾರಿಟಿ ಕೊಟ್ಟಿದ್ದಾರೆ. ಪಾಂಡವಪುರದಲ್ಲಿ ಮಾತನಾಡಿರುವ ನಿಖಿಲ್‌ ಕುಮಾರಸ್ವಾಮಿಯವರು, ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
ನಾನು ಸ್ಪರ್ಧೆ ಮಾಡಬೇಕೆಂದು ಹಲವು ಒತ್ತಡ ಹೇರುತ್ತಿದ್ದಾರೆ. ಇಲ್ಲದೇ ಹೋದರೆ ಕುಮಾರಸ್ವಾಮಿಯವರೇ ನಿಲ್ಲಲಿ ಎಂದು ಹೇಳುತ್ತಿದ್ದಾರೆ. ಕಲೆದ ಬಾರಿ ಸೋತಿದ್ದರಿಂದ ಈ ಬಾರಿಯೂ ಸ್ಪರ್ಧೆ ಮಾಡಲಿ ಎಂದು ಹಲವು ಮುಖಂಡರು ಆಶಿಸುತ್ತಿದ್ದಾರೆ. ಆದ್ರೆ ನಾನು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಲ್ಲ. ನಾನು ಸ್ಪರ್ಧೆ ಮಾಡೋದಿಲ್ಲ ಎಂದು ಈಗಾಗಲೇ ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಮಾತು ಬದಲಿಸೋದಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಸ್ಪರ್ಧಿಸಿದ್ದರಿಂದ ಹೆಚ್ಚು ಓಡಾಟ;

ನಾನು ಕಳೆದ ಬಾರಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ. ಹೀಗಾಗಿ ಇಲ್ಲಿನ ಜನರೊಂದಿಗೆ ಹೆಚ್ಚಿನ ಒಡನಾಟ ಇದೆ. ಈ ಕಾರಣಕ್ಕಾಗಿ ನಾನು ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಓಡಾಟ ಮಾಡುತ್ತಿದ್ದೇನೆ. ಹಾಗಂತ ನಾನು ಸ್ಪರ್ಧೆ ಮಾಡುತ್ತೇನೆ ಎಂದಲ್ಲ. ಎನ್‌ಡಿಎ ಗೆಲುವಿಗಾಗಿ ನಾನು ಜೆಡಿಎಸ್‌ ಯುವ ನಾಯಕನಾಗಿ ಸಂಘಟನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕೋಲಾರ, ಹಾಸನ, ಮೈಸೂರುಗಳಲ್ಲೂ ಓಡಾಡುತ್ತೇನೆ. ರಾಜ್ಯದ ಎಲ್ಲಾ ಕಡೆ ಪ್ರವಾಸ ಮಾಡುತ್ತೇನೆ. ಆದ್ರೆ ಮಂಡ್ಯದಲ್ಲಿ ಹೆಚ್ಚು ಓಡಾಟ ನಡೆಸುತ್ತೇನೆ ಎಂದು ನಮ್ಮ ಪಕ್ಷದ ವರಿಷ್ಠರಿಗೆ ಹೇಳಿದ್ದೇನೆ ಎಂದು ನಿಖಿಲ್‌ ಕುಮಾರಸ್ವಾಮಿ ಸ್ಪಷ್ಟನೆ ಕೊಟ್ಟಿದ್ದಾರೆ.

ಹಾಗಾದ್ರೆ ಮಂಡ್ಯ ಕ್ಷೇತ್ರದಲ್ಲಿ ಯಾರು ಸ್ಪರ್ಧೆ ಮಾಡುತ್ತಾರೆ..?

ನಿಖಿಲ್‌ ಕುಮಾರಸ್ವಾಮಿ ಅಖಾಡದಿಂದ ಹಿಂದೆ ಸರಿದಿದ್ದಾರೆ. ಇನ್ನು ಉಳಿದಿರೋದು ಕುಮಾರಸ್ವಾಮಿ… ಕುಮಾರಸ್ವಾಮಿಯವರು ಕೂಡಾ ಮಂಡ್ಯ ಕಡೆ ಹೆಚ್ಚಿನ ಗಮನ ಹರಿಸಿದ್ದಾರೆ. ಇತ್ತ ಬಿಜೆಪಿಯವರು ಕೂಡಾ ಕುಮಾರಸ್ವಾಮಿ ಸ್ಪರ್ಧೆಗೆ ಒತ್ತಡ ಹೇರುತ್ತಿದ್ದಾರೆ. ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತದೆ. ಈ ಕಾರಣಕ್ಕೆ ಕುಮಾರಸ್ವಾಮಿಯವರಿಗೆ ಮಂಡ್ಯದಿಂದ ಕಣಕ್ಕಿಳಿಸೋ ಸಾಧ್ಯತೆ ಇದೆ.

ಸುಮಲತಾ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ತಾರಾ..?

ಹಾಲಿ ಸಂಸದೆ ಸುಮಲತಾ ಅವರು ಮೊನ್ನೆ ಮೊನ್ನೆ ದೆಹಲಿಗೆ ಹೋಗಿ ಎಲ್ಲಾ ವರಿಷ್ಠ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಜೊತೆಗೆ ಅವರು ಮಂಡ್ಯದಿಂದ ಮಾತ್ರ ನಾನು ಸ್ಪರ್ಧೆ ಮಾಡುತ್ತೇನೆ. ಬೇರೆಲ್ಲೇ ಟಿಕೆಟ್‌ ಕೊಟ್ಟರೂ ಅಲ್ಲಿಗೆ ಹೋಗೋದಿಲ್ಲ. ಮಂಡ್ಯದ ಜನಕ್ಕಾಗಿಯೇ ನಾನು ಇರೋದು ಎಂದು ಹೇಳಿಬಿಟ್ಟಿದ್ದಾರೆ. ಹೀಗಾಗಿ, ಪಕ್ಷ ಯಾವುದಾದರೂ ಸುಮಲತಾ ಅವರು ಮಂಡ್ಯದಿಂದಲೇ ಸ್ಪರ್ಧೆ ಮಾಡೋ ಚಾನ್ಸಸ್‌ ಹೆಚ್ಚಿದೆ. ಒಂದು ವೇಳೆ ಮಂಡ್ಯ ಕ್ಷೇತ್ರವನ್ನು ಬಿಜೆಪಿಯವರು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಸುಮಲತಾ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Share Post