Politics

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್‌ ನೇಮಕ

ಬೆಂಗಳೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್‌ ರಾಜಕೀಯ ತಂತ್ರಗಾರಿಕೆ ಶುರು ಮಾಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಶಾಸಕ ಎಂ.ಬಿ.ಪಾಟೀಲರನ್ನು ನೇಮಕ ಮಾಡಿ ಎಐಸಿಸಿ ಅನುಮೋದನೆ ನೀಡಿದೆ.

ಎಂ.ಬಿ.ಪಾಟೀಲರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಎಐಸಿಸಿಗೆ ಪ್ರಸ್ತಾಪ ಸಲ್ಲಿಸಲಾಗಿತ್ತು. ಅದನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅಂಗೀಕರಿಸಿದ್ದಾರೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ. ಅಂದಹಾಗೆ ರಾಜ್ಯದಲ್ಲಿ ಒಕ್ಕಲಿಗರು ಹಾಗೂ ಲಿಂಗಾಯರು ಬಹುಸಂಖ್ಯಾತರಾಗಿದ್ದಾರೆ. ಎರಡೂ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ತಂತ್ರ ರೂಪಿಸಿದಂತೆ ಕಾಣುತ್ತಿದೆ. ಜೊತೆಗೆ ದಕ್ಷಿಣ ಹಾಗೂ ಉತ್ತರ ಕರ್ನಾಟಕ ಎರಡೂ ಕಡೆ ಪ್ರಾಬಲ್ಯ ಮೆರೆಯುವುದಕ್ಕೂ ಕಾಂಗ್ರೆಸ್‌ ತಂತ್ರ ಹೆಣೆದಿರುವಂತೆ ಕಾಣುತ್ತಿದೆ.

ಎಂ.ಬಿ.ಪಾಟೀಲ್‌ ಅವರು ಲಿಂಗಾಯತ ನಾಯಕರಾಗಿದ್ದು, ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಒಕ್ಕಲಿಗ ನಾಯಕರಾಗಿದ್ದು, ದಕ್ಷಿಣ ಕರ್ನಾಟಕ ಅದರಲ್ಲೂ ಹಳೇ ಮೈಸೂರು ಭಾಗದವರಾಗಿದ್ದಾರೆ. ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಕುರುಬ ಸಮುದಾಯದ ನಾಯಕರಾಗಿದ್ದು, ಅಹಿಂದ ವರ್ಗವನ್ನು ಒಗ್ಗೂಡಿಸುವ ಶಕ್ತಿ ಹೊಂದಿದ್ದಾರೆ. ಹೀಗಾಗಿಯೇ ಕಾಂಗ್ರೆಸ್‌ ಜಾತಿ ಲೆಕ್ಕಾಚಾರದಲ್ಲಿ ಜವಾಬ್ದಾರಿಗಳನ್ನು ಕೊಟ್ಟಿ ಎಲ್ಲಾ ವರ್ಗದವರನ್ನೂ ಸೆಳೆಯಲು ಮುಂದಾಗಿರುವಂತೆ ಕಾಣುತ್ತಿದೆ.

Share Post