NationalPolitics

ಜಗನ್‌ಮೋಹನ್‌ ರೆಡ್ಡಿ ಸಹೋದರಿ ವೈ.ಎಸ್‌.ಶರ್ಮಿಳಾ ಇನ್ನೆರಡು ದಿನದಲ್ಲಿ ಕಾಂಗ್ರೆಸ್‌ ಸೇರ್ಪಡೆ..?

ಹೈದರಾಬಾದ್‌; ತೆಲಂಗಾಣದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಈಗ ಆಂಧ್ರಪ್ರದೇಶದ ಮೇಲೆ ಕಣ್ಣಿಟ್ಟಿದೆ. ಅದಕ್ಕಾಗಿ ವೈಎಸ್‌ ರಾಜಶೇಖರರೆಡ್ಡಿ ಪುತ್ರಿ ವೈ.ಎಸ್‌.ಶರ್ಮಿಳಾ ಅವರನ್ನು ಬಳಸಿಕೊಳ್ಳಲು ಮುಂದಾಗಿದೆ. ತೆಲಂಗಾಣದಲ್ಲಿ ವೈಎಸ್‌ಆರ್‌ ತೆಲಂಗಾಣ ಪಾರ್ಟಿ ಸ್ಥಾಪಿಸಿದ್ದ ಶರ್ಮಿಳಾ, ಕೊನೆಯ ಹಂತದಲ್ಲಿ ಅಖಾಡದಿಂದ ಹಿಂದೆ ಸರಿದ್ದರು. ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು. ಇದೀಗ ಅವರ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನ ಮಾಡೋದಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಅವರ ತಮ್ಮ ಪಕ್ಷದ ಮುಖಂಡರ ಜೊತೆ ಸಭೆಯನ್ನು ಕೂಡಾ ನಡೆಸಿದ್ದಾರೆ. ಅಂದುಕೊಂಡಂತೆ ಆದರೆ ಇದೇ ಜನವರಿ 4ರಂದು ಕಾಂಗ್ರೆಸ್‌ ಜೊತೆ ವೈಎಸ್‌ಆರ್‌ ತೆಲಂಗಾಣ ಪಾರ್ಟಿ ವಿಲೀನವಾಗುವ ಎಲ್ಲಾ ಸಾಧ್ಯತೆಗಳೂ ಇವೆ.

ಅಂದಹಾಗೆ ಆಂಧ್ರಪ್ರದೇಶದಲ್ಲಿ ಶರ್ಮಿಳಾ ಅವರ ಸಹೋದರ ವೈ.ಎಸ್‌.ಜಗನ್‌ಮೋಹನ್‌ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾರೆ. ಜಗನ್‌ ಜೊತೆ ಶರ್ಮಿಳಾ ಜಗಳ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ ಇದನ್ನೇ ಬಳಸಿಕೊಂಡು ಆಂಧ್ರಪ್ರದೇಶದಲ್ಲಿ ಜಗನ್‌ ವಿರುದ್ಧ ಶರ್ಮಿಳಾ ಅವರನ್ನು ಛೂ ಬಿಟ್ಟು ಪೊಲಿಟಿಕಲ್‌ ಗೇಮ್‌ ಆಡೋದಕ್ಕೆ ಪ್ಲ್ಯಾನ್‌ ಮಾಡಿದೆ. ಇದರ ಭಾಗವಾಗಿ ಈಗಾಗಲೇ ಶರ್ಮಿಳಾ ಜೊತೆ ಮಾತುಕತೆಗಳು ಕೂಡಾ ನಡೆದಿವೆ ಎಂದು ತಿಳಿದುಬಂದಿದೆ.

ಜಗನ್‌ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಪಾರ್ಟಿ ಆಂಧ್ರಪ್ರದೇಶದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಶರ್ಮಿಳಾ ಅವರ ಪಾತ್ರ ಕೂಡಾ ಇದೆ. ಜಗನ್‌ ಜೈಲಿನಲ್ಲಿದ್ದಾಗ ಶರ್ಮಿಳಾ ಆಂಧ್ರಪ್ರದೇಶದಾದ್ಯಂತ ಪಾದಯಾತ್ರೆ ಮಾಡಿದ್ದರು. ಆದ್ರೆ, ಆಸ್ತಿ ವಿಚಾರದಲ್ಲಿ ಇಬ್ಬರಿಗೂ ಜಗಳ ಬಂದಿದ್ದರಿಂದ ಶರ್ಮಿಳಾ ಅವರು ಅಣ್ಣನಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೊತೆ ವೈಎಸ್‌ ರಾಜಶೇಖರ್‌ ರೆಡ್ಡಿ ಪತ್ನಿ ಕೂಡಾ ಮಗಳು ಶರ್ಮಿಳಾ ಅವರ ಪರವಾಗಿಯೇ ಇದ್ದಾರೆ. ಇಬ್ಬರನ್ನೂ ಬಳಸಿಕೊಂಡರೆ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್‌ ಬಲಪಡಿಸಬಹುದು ಎಂಬ ಲೆಕ್ಕಾಚಾರವಿದೆ.

ತೆಲಂಗಾಣದಲ್ಲಿ ವೈಎಸ್‌ಆರ್‌ ತೆಲಂಗಾಣ ಪಕ್ಷ ಬಲಪಡಿಸೋದಕ್ಕೆ ಶರ್ಮಿಳಾ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ಅವರಿಗೂ ಕಾಂಗ್ರೆಸ್‌ ಪಕ್ಷ ಸೇರುವುದು ಅನಿವಾರ್ಯವಾಗಿದೆ. ಜೊತೆಗೆ ಅಣ್ಣನ ವಿರುದ್ಧ ಸೇಡು ತೀರಿಸಿಕೊಳ್ಳಲೂ ಕಾಂಗ್ರೆಸ್‌ ಪಕ್ಷ ಶರ್ಮಿಳಾ ಅವರಿಗೆ ವೇದಿಕೆಯಾಗಬಹುದು.

 

Share Post