BengaluruPolitics

ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ಭರ್ಜರಿ ರಣತಂತ್ರ!; ಕಾಂಗ್ರೆಸ್‌ ಸೇರ್ತಾರಾ ಸಿಪಿವೈ..?

ಬೆಂಗಳೂರು; ರಾಜ್ಯದಲ್ಲಿ ಉಪಚುನಾವಣೆ ಕಣ ರಂಗೇರುತ್ತಿದೆ.. ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಉಪಚುನಾವಣೆ ಅಷ್ಟೇನೂ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿಲ್ಲ.. ಆದ್ರೆ ಚನ್ನಪಟ್ಟಣ ಮಾತ್ರ ಇಡೀ ರಾಜ್ಯದ ಗಮನ ಸೆಳೆದಿದೆ.. ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ.. ಹೀಗಾಗಿ ಬಿಜೆಪಿ ಟಿಕೆಟ್‌ ಬಯಸಿದ್ದ ಸಿ.ಪಿ.ಯೋಗೇಶ್ವರ್‌ ತಮ್ಮ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.. ಪಕ್ಷೇತರನಾಗಿ ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದಾರೆ.. ಈ ನಡುವೆ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಅಭ್ಯರ್ಥಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ.. ಹೀಗಾಗಿ ಕಾಂಗ್ರೆಸ್‌ ರಣತಂತ್ರಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿವೆ..
ಚನ್ನಪಟ್ಟಣದಲ್ಲಿ ಈಗಾಗಲೇ ಕಾಂಗ್ರೆಸ್‌ ತನ್ನ ಅಭ್ಯರ್ಥಿಯನ್ನು ಪ್ರಕಟಿಸಬಹುದಿತ್ತು.. ಆದ್ರೆ ಇಲ್ಲಿಯತನಕವೂ ಕುತೂಹಲ ಉಳಿಸಿಕೊಂಡೇ ಬಂದಿದೆ.. ಡಿ.ಕೆ.ಶಿವಕುಮಾರ್‌ ನಾನೇ ಅಭ್ಯರ್ಥಿ, ಕಾಂಗ್ರೆಸ್‌ ಚಿಹ್ನೆಯೇ ಅಭ್ಯರ್ಥಿ ಎಂದು ಹೇಳಿಕೊಂಡು ಬಂದಿದ್ದಾರೆ.. ಇನ್ನೊಂದೆಡೆ ಡಿ.ಕೆ.ಸುರೇಶ್‌ ಅವರು ಅಚ್ಚರಿ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳುತ್ತಿದ್ದಾರೆ.. ಹಾಗೆ ನೋಡಿದರೆ ಡಿ.ಕೆ.ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿಗೆ ಈ ಕ್ಷೇತ್ರ ಪ್ರತಿಷ್ಠೆಯ ಕ್ಷೇತ್ರ.. ಹೀಗಾಗಿ ಇಬ್ಬರೂ ಕೂಡಾ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.. ನಿಖಿಲ್‌ ಕುಮಾರಸ್ವಾಮಿಯವರನ್ನು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸೋದು ಬಹುತೇಕ ಖಚಿತವಾಗಿದೆ.. ಆದ್ರೆ ಯೋಗೇಶ್ವರ್‌ ಇಂದು ಡೆಡ್‌ಲೈನ್‌ ಕೊಟ್ಟಿದ್ದಾರೆ.. ಒಂದು ವೇಳೆ ಈ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ ಯೋಗೇಶ್ವರ್‌ ಅಭ್ಯರ್ಥಿಯಾಗುತ್ತಾರೆ.. ಈ ಅವಕಾಶ ಸಿಗುವುದು ಬಹುತೇಕ ಡೌಟು.. ಹೀಗಾಗಿ ಸಿ.ಪಿ.ಯೋಗೇಶ್ವರ್‌ ಪಕ್ಷೇತರನಾಗಿ ಸ್ಪರ್ಧೆ ಮಾಡೋದಕ್ಕೆ ಸಿದ್ಧತೆ ಮಾಡುತ್ತಿದ್ದಾರೆ..
ಇನ್ನು ಯಾವಾಗ ಯೋಗೇಶ್ವರ್‌ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದರೋ, ಆಗಲೇ ಕಾಂಗ್ರೆಸ್‌ ನಾಯಕರು ಅವರನ್ನು ಸಂಪರ್ಕಿಸೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.. ಕಾಂಗ್ರೆಸ್‌ಗೆ ಕರೆತಂದು ಕಾಂಗ್ರೆಸ್‌ನಿಂದ ಅವರನ್ನೇ ಕಣಕ್ಕಿಳಿಸಲು ಪ್ರಯತ್ನಿಸಲಾಗುತ್ತಿದೆ.. ಆದ್ರೆ ಯೋಗೇಶ್ವರ್‌ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.. ಒಂದು ವೇಳೆ ಯೋಗೇಶ್ವರ್‌ ಪಕ್ಷೇತರವಾಗಿ ಸ್ಪರ್ಧೆ ಮಾಡೋದು ಫಿಕ್ಸ್‌ ಆದರೆ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.. ಹಾಗೆ ನೋಡಿದರೆ ಯೋಗೇಶ್ವರ್‌ ಹಾಗೂ ಜೆಡಿಎಸ್‌ಗೆ ಹೋಲಿಸಿಕೊಂಡರೆ ಕಾಂಗ್ರೆಸ್‌ ಪ್ರಾಬಲ್ಯ ಇಲ್ಲಿ ಕಡಿಮೆಯೇ.. ಯೋಗೇಶ್ವರ್‌ಗೆ ತನ್ನದೇ ಆದ ವೋಟ್‌ ಬ್ಯಾಂಕ್‌ ಇದೆ.. ಇನ್ನು ಜೆಡಿಎಸ್‌ ಕೂಡಾ ಪ್ರಬಲ ಕಾರ್ಯಕರ್ತರ ಪಡೆಯನ್ನು ಹೊಂದಿದೆ.. ಹೀಗಾಗಿ ಯೋಗೇಶ್ವರ್‌ ಹಾಗೂ ನಿಖಿಲ್‌ ಕುಮಾರಸ್ವಾಮಿ ವಿರುದ್ಧ ಗೆಲ್ಲಬೇಕು ಅಂದ್ರೆ ಕಾಂಗ್ರೆಸ್‌ ಅತ್ಯಂತ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಾಗುತ್ತದೆ..
ಎರಡು ಬಾರಿ ಸೋತಿರುವ ನಿಖಿಲ್‌ ಕುಮಾರಸ್ವಾಮಿಯವರಿಗೆ ಈ ಬಾರಿ ಸಿಂಪಥಿ ಮತಗಳೂ ಸಿಗಲಿವೆ.. ಇತ್ತ ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಡಿ.ಕೆ.ಸುರೇಶ್‌ ಬಗ್ಗೆಯೂ ಜನರಲ್ಲಿ ಕೊಂಚ ಮಮಕಾರ ಇದೆ.. ಹೀಗಾಗಿ, ಚುನಾವಣೆಯಲ್ಲಿ ಯಾವ ಪರ ಮತದಾರ ಒಲವು ತೋರುತ್ತಾನೆ ಅನ್ನೋದು ಈಗಲೇ ಗೊತ್ತಾಗುವುದಿಲ್ಲ.. ಆದ್ರೆ ಕಾಂಗ್ರೆಸ್‌ ಸ್ಟ್ರ್ಯಾಟಜಿ ಇಷ್ಟಕ್ಕೇ ಮುಗಿಯೋದಿಲ್ಲ.. ಚನ್ನಪಟ್ಟಣದಲ್ಲಿ ಜೆಡಿಎಸ್‌ ಸೋಲಿಸೋದಷ್ಟೇ ಡಿಕೆ ಸಹೋದರರ ಗುರಿ ಹೀಗಾಗಿ, ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಗೆಲ್ಲೋದು ಅನುಮಾನ ಅಂತಾದರೆ, ಕಾಂಗ್ರೆಸ್‌ನಿಂದ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಪರೋಕ್ಷ ಸಿ.ಪಿ.ಯೋಗೇಶ್ವರ್‌ಗೆ ಕಾಂಗ್ರೆಸ್‌ ಬೆಂಬಲ ಸೂಚಿಸಿದರೂ ಕೂಡಾ ಅಚ್ಚರಿ ಇಲ್ಲ.. ಹೀಗಾಗಿ ಇವತ್ತು ಯಾವ ರೀತಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ ಅನ್ನೋದರ ಮೇಲೆ ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ಖದರ್‌ ನಿರ್ಧಾರವಾಗಲಿದೆ..

Share Post