ಒಮಿಕ್ರಾನ್ ಹಿನ್ನೆಲೆ; ಚುನಾವಣೆ ಸಮಾವೇಶ ನಡೆಸದಂತೆ ಕೋರ್ಟ್ ಒತ್ತಾಯ
ಪ್ರಯಾಗ್ ರಾಜ್: ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ, ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ ಸಭೆಗಳು, ರ್ಯಾಲಿಗಳನ್ನು ಆಯೋಜಿಸುತ್ತಿವೆ. ಇದರಿಂದಾಗಿ ಒಮಿಕ್ರಾನ್ ಹರಡುವ ಭೀತಿ ಇದೆ. ಹೀಗಾಗಿ ಚುನಾವಣೆ ಸಮಯದಲ್ಲಿ ರಾಜಕೀಯ ಸಮಾವೇಶಗಳನ್ನು ನಡೆಸುವುದನ್ನು ನಿಲ್ಲಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರಿದ್ದ ಪೀಠ, ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಕೊರೊನಾ ಮೂರನೇ ಅಲೆ ಕೂಡಾ ವಕ್ಕರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಸಮಾವೇಶಗಳು ನಡೆಸದಿದ್ದರೆ ಒಳ್ಳೆಯದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಹೆಚ್ಚುತ್ತಿರುವ ಒಮಿಕ್ರಾನ್ ಹಾಗೂ ಕೊರೋನಾ ಪ್ರಕರಣಗಳಿಂದಾಗಿ ಚೀನಾ, ನೆದರ್ಲೆಂಡ್ ಮತ್ತು ಜರ್ಮನಿಯಂಥ ದೇಶಗಳು ಈಗಾಗಲೇ ಲಾಕ್‌ಡೌನ್ ವಿಧಿಸುತ್ತಿವೆ. ಭಾರತದಲ್ಲಿ ಎರಡನೇ ಅಲೆಯ ವೇಳೆ, ಲಕ್ಷಾಂತರ ಜನರು ಕೊರೊನಾ ವೈರಸ್‌ಗೆ ತುತ್ತಾಗಿದ್ದರು. ಅನೇಕರು ಪ್ರಾಣ ಕಳೆದುಕೊಂಡಿದ್ದರು. ಮುಂದೆ ಇಂತಹದ್ದೇ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ಹೇಳಿದೆ.