Politics

ಪಾದಯಾತ್ರೆ ತಕ್ಷಣ ನಿಲ್ಲಿಸಿ: ಕೈ ಹೈಕಮಾಂಡ್‌ ಸೂಚನೆ

ದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಮೇಕೆದಾಟು ಯೋಜನೆಗೆ ಆಗ್ರಹಿಸಿ ಕೈಗೊಂಡಿರುವ ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿದೆ. ಕೊರೊನಾ ಮೂರನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಕೈಬಿಡುವಂತೆ ಎಐಸಿಸಿಯಿಂದ ರಾಜ್ಯ ಕೈ ನಾಯಕರಿಗೆ ಸಂದೇಶ ರವಾನೆ ಆಗಿದೆ. ರಣದೀಪ್‌ ಸುರ್ಜೇವಾಲಾ ಮೂಲಕ  ಪಾದಯಾತ್ರೆಗೆ ಬ್ರೇಕ್‌ ಹಾಕುವಂತೆ ಎಐಸಿಸಿ ಅದೇಶಿಸಿದೆ. ಇದಕ್ಕೂ ಮೊದಲು ರಾಹುಲ್‌ ಗಾಂಧಿ ಪಕ್ಷಕ್ಕೆ ಅಪಮಾನ ಅಥವಾ ಮುಜುಗರ ಉಂಟುಮಾಡುವ ಕೆಲಸವನ್ನು ಮಾಡಬೇಡಿ ಎಂದು  ಡಿ.ಕೆ.ಶಿವಕುಮಾರ್‌ಗೆ ಕಿವಿ ಮಾತನ್ನು ಹೇಳಿದ್ದಾರೆ.

ಏನೇ ಮಾಡಿದ್ರೂ ಕಾನೂನು ಚೌಕಟ್ಟಿನಲ್ಲಿ ಇರಲಿ, ಹೀಗೆ ಮಾಡಿದ್ರೆ ಪಕ್ಷಕ್ಕೆ ಹಿನ್ನಡೆಯಾಗುತ್ತೆ ಈಗಾಗಲೇ ಉತ್ತರಪ್ರದೇಶದಲ್ಲಿ ಕಾಂಗ್ರಸ್‌ ವರ್ಚುವಲ್ ಸಭೆ ನಡೆಸಲು ತೀರ್ಮಾನ ಮಾಡಿದೆ. ನಿಮ್ಮ ಈ ನಿರ್ಧಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಮಾಡಬೇಡಿ ಎಂದು ದೂರವಾಣಿ ಕರೆ ಮೂಲಕ ತಿಳಿಸಿದ್ದಾರೆ.

ರಾಹುಲ್‌ ಗಾಂಧಿ ಹಾಗೂ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಕೈ ನಾಯಕರು ರಾಮನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಸಭೆ ಮಾಡ್ತಿದಾರೆ. ಪಾದಯಾತ್ರೆ  ಮುಂದುವರೆಸೋದಾ..ನಿಲ್ಲಿಸೋದಾ ಎಂಬುದರ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ. ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗ ರೆಡ್ಡಿ, ಸಲೀಂ ಅಹಮದ್, ಧ್ರುವ ನಾರಾಯಣ, ಹಿರಿಯ ಮುಖಂಡರಾದ ರಮೇಶ್ ಕುಮಾರ್, ಕೆ.ಎಚ್. ಮುನಿಯಪ್ಪ, ಹರಿಪ್ರಸಾದ್, ಚೆಲುವರಾಯಸ್ವಾಮಿ  ಉಪಸ್ಥಿತರಿದ್ದಾರೆ.

Share Post