NationalPolitics

ಸೆಪ್ಟೆಂಬರ್‌ 30 ರಿಂದ ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ

ಬೆಂಗಳೂರು; ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರಂಭಿಸಿರುವ ಭಾರತ್‌ ಜೋಡೋ ಯಾತ್ರೆ ಈಗ ಕೇರಳದಲ್ಲಿದೆ. ಇದೇ 30 ರಂದು ಕರ್ನಾಟಕ ಪ್ರವೇಶ ಮಾಡಲಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಖುದ್ದು ಆಸಕ್ತಿ ವಹಿಸಿ ಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದಾರೆ. ಸತತವಾಗಿ ಸಭೆಗಳನ್ನು ನಡೆಸುತ್ತಾ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತಿದ್ದಾರೆ. ಜೊತೆಗೆ ಯಾತ್ರೆಯಲ್ಲಿ ಪಾಲ್ಗೊಳ್ಳುವವರ ನೋಂದಣಿ ಕೂಡಾ ನಡೆಯುತ್ತಿದೆ. 

ರಾಜ್ಯದಲ್ಲಿ ನಡೆಯುವ ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ದಸರಾ ಬರಲಿದೆ. ಈ ವೇಳೆ 2 ದಿನ ಯಾತ್ರೆಗೆ ವಿಶ್ರಾಂತಿ ನೀಡಲಾಗುತ್ತದೆ. ರಾಜ್ಯದ ಯಾತ್ರೆಯಲ್ಲಿ ಆಸಕ್ತಿ ಇರುವವರಿಗೆ ನಡೆಯಲು ಅವಕಾಶ ಕಲ್ಪಿಸಿಕೊಡಲು ಕೆಪಿಸಿಸಿ ತೀರ್ಮಾನಿಸಿದೆ. ಕೆಲವರು 1 ದಿನ ನಡೆದರೆ, ಮತ್ತೆ ಕೆಲವರು 21 ದಿನ ನಡೆಯಬಹುದು. ಹೀಗಾಗಿ ಪಕ್ಷಾತೀತವಾಗಿ ಎಲ್ಲರಿಗೂ ಮುಕ್ತ ಅವಕಾಶ ಮಾಡಿಕೊಡಲು ಆನ್ ಲೈನ್ ನೋಂದಣಿ ಆರಂಭಿಸುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಈ ಯಾತ್ರಿಗಳಿಗೆ ವಾಸ್ತವ್ಯ, ಆಹಾರ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರದೇಶ ಯಾತ್ರಿಗಳ ಜತೆಗೆ ಸ್ವಯಂ ಇಚ್ಛೆ ಯಾತ್ರಿಗಳು ಹಾಗೂ ಡಿಜಿಟಲ್ ಯಾತ್ರಿಗಳಿಗೆ ಅವಕಾಶ ಮಾಡಿಕೊಡಲು ಕೂಡಾ ನಿರ್ಧರಿಸಲಾಗಿದೆ.

ಸ್ವಾತಂತ್ರ್ಯ ನಡಿಗೆ ಸಮಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 35 ವರ್ಷಕ್ಕಿಂತ ಕಡಿಮೆ ವಯೋಮಾನದವರು 76 ಸಾವಿರ ಜನ ಇದ್ದರು. ಹೀಗಾಗಿ ಯುವಕರಿಗೆ ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲು ನೋಂದಣಿ ಆರಂಭಿಸಲಾಗಿದೆ.

ರಾಜ್ಯದಲ್ಲಿ ಎಲ್ಲ ವರ್ಗಗಳ ಜನರ ಮಧ್ಯೆ ಸಾಮರಸ್ಯ ಕಲ್ಪಿಸಿ ನಮ್ಮ ನಾಡನ್ನು ಸರ್ವಜನಾಂಗದ ಶಾಂತಿ ತೋಟವಾಗಿ ಮಾಡಿ ದೇಶದಲ್ಲಿ ಶಾಂತಿ ಕಾಪಾಡುವುದು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಿ ಯುವಕರಿಗೆ ಉದ್ಯೋಗ ಕಲ್ಪಿಸಲು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಆದಾಯ ಕುಸಿತದ ವಿರುದ್ಧ, ರಾಜ್ಯವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಉತ್ತಮ ಆಡಳಿತಕ್ಕೆ, ದೇಶ ಹಾಗೂ ರಾಜ್ಯದ ರೈತರು, ಕಾರ್ಮಿಕರ ಬದುಕು ಸುಧಾರಿಸುವ ನಿಟ್ಟಿನಲ್ಲಿ ಈ ಯಾತ್ರೆ ಮಾಡುತ್ತಿದ್ದೇವೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ನಡೆಯಲಿರುವ ಭಾರತ ಐಕ್ಯತಾ ಯಾತ್ರೆ ಸಮಯದಲ್ಲಿ ಮಧ್ಯಾಹ್ನ ಬಿಡುವಿನ ವೇಳೆ ನಿರುದ್ಯೋಗಿ ಯುವಕರಿಗೆ ರಾಹುಲ್ ಗಾಂಧಿ ಅವರ ಜತೆ ಸಂವಾದ ಮಾಡಲು ಅವಕಾಶ ಮಾಡಿಕೊಡಲಾಗುವುದು. ಇವರ ಜತೆಗೆ ಮಹಿಳೆಯರು, ಕಾರ್ಮಿಕರು, ಸಂಘ ಸಂಸ್ಥೆಗಳು, ಎರಡು ಕಡೆ ರೈತರು, ಪರಿಶಿಷ್ಟರು, ನಾಗರೀಕ ಸಮಾಜದವರು, ಅಲ್ಪಸಂಖ್ಯಾತರು, ಶ್ರಮಿಕರಿಗೂ ಸಂವಾದಕ್ಕೆ ಒಂದೊಂದು ದಿನ ಅವಕಾಶ ಕಲ್ಪಿಸಲಾಗುತ್ತದೆ.

Share Post