Politics

ಸಿದ್ದರಾಮಯ್ಯ ಸೀಟು ಅಲುಗಾಡುತ್ತಿದೆಯಾ..?; ಸಿಎಂ ಶಿಷ್ಯನೇ ಹೀಗೆ ಹೇಳಿದ್ಯಾಕೆ..?

ಕೋಲಾರ; ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹೆಚ್ಚು ಸ್ಥಾನ ಬರದೇ ಇದ್ದರೆ ಸಿಎಂ ಸಿದ್ದರಾಮಯ್ಯ ತಮ್ಮ‌‌ ಸ್ಥಾನ ಕಳೆದುಕೊಳ್ತಾರಾ..? ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯಗೆ ಟಾರ್ಗೆಟ್ ಕೊಟ್ಟಿದೆಯಾ..? ಈ ಪ್ರಶ್ನೆಗಳಿಗೆ ಹೌದು ಎಂದೇ ಹೇಳಬೇಕು.. ಯಾಕಂದ್ರೆ ಕಾಂಗ್ರೆಸ್ ನವರೇ ಇತ್ತೀಚೆಗೆ ಇಂತಹ ಮಾತುಗಳನ್ನಾಡುತ್ತಿದ್ದಾರೆ. ಸಿದ್ದರಾಮಯ್ಯ ಶಿಷ್ಯ ಹಾಗೂ ಸಚಿವ ಬೈರತಿ ಸುರೇಶ್ ಅವರು ಕೂಡಾ ಇದೇ ರೀತಿಯ ಮಾತುಗಳನ್ನಾಡಿದ್ದಾರೆ.

  ಕೋಲಾರ ನಗರದ ಹಾಲಿಸ್ಟರ್ ಭವನದಲ್ಲಿ ನಡೆದ ಕುರುಬ ಸಮುದಾಯದ ಮುಖಂಡ ಸಭೆ ನಡೆಯಿತು. ಈ ಸಭೆಯಲ್ಲಿ  ಮಾತನಾಡಿದ ಸಚಿವ ಬೈರತಿ ಸುರೇಶ್, ಕಾಂಗ್ರೆಸ್​ ಅಭ್ಯರ್ಥಿಗಳು ಸೋತರೆ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಕಂಟಕ ಆಗುತ್ತದೆ. ಹೀಗಾಗಿ ಕುರುಬ ಸಮುದಾಯದವರು ಕಾಂಗ್ರೆಸ್ ಗೆ ಮತ ಹಾಕಬೇಕು. ಸಿದ್ದಾರಮಯ್ಯ ಕೈ ಬಲಪಡಿಸಬೇಕು ಎಂದು ಹೇಳಿದ್ದಾರೆ. ನೀವು ಬೇರೆ ಮನಸ್ಸು ಮಾಡಿದರೆ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ತೊಂದರೆಯಾಗಲಿದೆ ಎಂದು ಹೇಳಿದರು.

 ಇತ್ತೀಚೆಗೆ ಗುಬ್ಬಿ ಶಾಸಕ ಶ್ರೀನಿವಾಸ್ ಅವರು ಇದೇ ರೀತಿಯ ಮಾತನ್ನಾಡಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲಬೇಕು. ಇಲ್ಲದಿದ್ದರೆ, ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊರಬೇಕಾಗಿ ಬರಬಹುದು ಎಂದು ಶಾಸಕ ಶ್ರೀನಿವಾಸ್ ಹೇಳಿದ್ದರು.

  ಇನ್ನು ಸಿದ್ದರಾಮಯ್ಯ ಅವರು ಕೂಡಾ ವರುಣಾ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ನಾನು ಸಿಎಂ ಆಗಿ ಮುಂದುವರೆಯಬೇಕೋ ಬೇಡವೋ ಎಂದು ಕೇಳಿದ್ದರು. ಇನ್ನು ಮೈಸೂರಿನಲ್ಲಿ ನಡೆದ ಒಕ್ಕಲಿಗ ಮುಖಂಡರ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಾದ ಮಾತುಕತೆ ಬಗ್ಗೆ ಮಾತನಾಡಿದ್ದರು. ಇದೆಲ್ಲಾ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆ ಕಡಿಮೆ ಸ್ಥಾನ ಸಿಕ್ಕರೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Share Post