BengaluruPolitics

ಚನ್ನಪಟ್ಟಣ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಸಂಜೆ ಫೈನಲ್!

ಮಂಡ್ಯ; ಚನ್ನಪಟ್ಟಣ ಉಪ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಇಂದು ಸಂಜೆ ಬೆಂಗಳೂರಿನಲ್ಲಿ ಸಭೆ ಇದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಪಕ್ಷದ ನಾಯಕರ ಜತೆ ಸಮಾಲೋಚನೆ ನಡೆಸುವುದಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ಎಲ್ಲ ನಾಯಕರು ಕೂತು ಚರ್ಚೆ ಮಾಡುತ್ತಿದ್ದೇವೆ. ಅಭ್ಯರ್ಥಿಯ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಜೆಡಿಎಸ್ ಗೆ ಮರುಜನ್ಮ ಕೊಟ್ಟಿದ್ದೇವೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಯಾರಿಗೆ ಯಾರು ಮರುಜನ್ಮ ಕೊಟ್ಟಿದ್ದಾರೆ ಎಂದು ಬೀದಿಯಲ್ಲಿ ಚರ್ಚೆ ಮಾಡೋಕೆ ಆಗಲ್ಲ ಅವರು ಹೇಳಿದ್ದಾರೆ.

ಮಂಡ್ಯದಲ್ಲಿ ಇಂದು ಬೆಳಗ್ಗೆ ರೈತ ಸಭಾಂಗಣ ನವೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮಗಳ ಜತೆ ಅವರು ಮಾತನಾಡಿದರು.

ಯಾವ ರೀತಿ ನನ್ನ ಪಕ್ಷಕ್ಕೆ ಶಕ್ತಿ ತುಂಬಿದ್ದೇನೆ ಎಂಬ ಚರ್ಚೆ ಈಗ ಅನಗತ್ಯ. ದೆಹಲಿ ನಾಯಕರಿಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಅದನ್ನೆಲ್ಲ ನಾನು ಬೀದಿಯಲ್ಲಿ ನಿಂತು ಚರ್ಚೆ ಮಾಡಲೇ? ಅದರ ಅವಶ್ಯಕತೆ ಇಲ್ಲ. ನಾನು ಈ ಕ್ಷಣದವರೆಗೂ ಜೆಡಿಎಸ್ – ಬಿಜೆಪಿ ಎಂದು ಬೇರ್ಪಡಿಸಿ ಮಾತನಾಡಿಲ್ಲ ಎಂದು ಅವರು ಹೇಳಿದರು.

ನಾನು ಚನ್ನಪಟ್ಟಣ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಯೇ ನಿಲ್ಲುತ್ತಾರೆ ಎಂದು ಹೇಳಿದೇನೆಯೇ ಹೊರತು, ಜೆಡಿಎಸ್ ಅಭ್ಯರ್ಥಿಯನ್ನು ಹಾಕುತ್ತೇನೆ ಎಂದು ಹೇಳಿಲ್ಲ. ತ್ಯಾಗದ ಬಗ್ಗೆ ಮಾತನಾಡುವವರು ಅವರ ಆತ್ಮಕ್ಕೆ ಪ್ರಶ್ನೆ ಹಾಕಿಕೊಳ್ಳಬೇಕು‌. ನಮ್ಮ ಮೈತ್ರಿಗೆ ಅಡ್ಡಿ ಆಗಬಾರದು ಎಂದು ನಡೆದುಕೊಳ್ಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ

ಈ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹೇಗಿದೆ ನೋಡ್ತಿದ್ದೇನೆ. ಆಡಳಿತ ನಡಿತಿದ್ಯಾ? ಸರ್ಕಾರ ಇದ್ಯಾ? ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದೆ. ಬಾಗಲಕೋಟೆ, ಹಾವೇರಿ, ಚಿತ್ರದುರ್ಗದಲ್ಲಿ ಏನಾಗಿದೆ‌? ಈರುಳ್ಳಿ, ದ್ರಾಕ್ಷಿ, ಜೋಳ ಬೆಳೆಯುವವರ ಸ್ಥಿತಿ ಏನಾಗಿದೆ

ಅದರ ಬಗ್ಗೆ ಕೇಳುವವರು ದಿಕ್ಕಿಲ್ಲದಂತಾಗಿದೆ. ಬೆಂಗಳೂರು ನಗರ ಜಲಾವೃತವಾಗಿದೆ. ಯಾರಾದ್ರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರಾ?ಅದರ ಬಗ್ಗೆ ಯಾರಿಗಾದ್ರು ಚಿಂತನೆ ಇಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವರು ಕಿಡಿಕಾತ್ತಿದ್ದಾರೆ.

 

Share Post