Politics

10 ದಿನಗಳ ವಿಧಾನಮಂಡಲ ಕಲಾಪ 10 ವಿಧೇಯಕ ಅಂಗೀಕಾರ

ಬೆಳಗಾವಿ: ಚಳಿಗಾಲದ ವಿಧಾನಮಂಡಲ ಅಧಿವೇಶನ ಇಂದಿಗೆ ಮುಕ್ತಾಯವಾಗಿದೆ.  ಒಟ್ಟಾರೆ 52 ಗಂಟೆ ಕಾಲ ಕಲಾಪ ನಡೆದಿದ್ದು, ಒಟ್ಟು 10 ವಿಧೇಯಕಗಳನ್ನು ಅಂಗೀಕಾರ ಮಾಡಲಾಗಿದೆ. ರಾಯಣ್ಣ ಪ್ರತಿಮೆ ಭಗ್ನಗೊಳಿಸಿದ ಬಗ್ಗೆ ಖಂಡನಾ ನಿರ್ಣಯ ಮಂಡಿಸಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ 5 ಗಂಟೆ ಚರ್ಚೆ ನಡೆದಿದೆ ಎಂದು 15ನೇ ವಿಧಾನಸಭೆಯ 11ನೇ ಕಾರ್ಯಕಲಾಪದ ಬಗ್ಗೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿವರಣೆ ನೀಡಿದ್ದಾರೆ.

ಶಾಸಕರ 1,921 ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಲಾಗಿದೆ. ವಿಧಾನಸಭೆಯಲ್ಲಿ 149 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯ ವೇಳೆಯಲ್ಲಿ 24 ವಿಷಯಗಳ ಬಗ್ಗೆ ಚರ್ಚೆ ನಡೆದಿದೆ. ಪ್ರಶ್ನೋತ್ತರ ಕಲಾಪ ಶೇಕಡಾ 99ರಷ್ಟು ಯಶಸ್ವಿಯಾಗಿದೆ. ಕೊರೊನಾ ಕಾಲದಲ್ಲಿ ಎಲ್ಲರೂ ಸುರಕ್ಷಿತವಾಗಿರುವಂತೆ ಸಲಹೆ ನೀಡಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನದಲ್ಲಿ ಸಮಯ ಮೀಸಲಿಟ್ಟಿದ್ದೇವೆ. ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ. ಉತ್ತರ ಕರ್ನಾಟಕ ಬಗ್ಗೆ ದಕ್ಷಿಣ ಕರ್ನಾಟಕದವರು ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ನೀರಾವರಿ ಹಾಗೂ ಎಲ್ಲಾ ಸಮಸ್ಯೆ ಬೇಗನೇ ಬಗೆಹರಿಸುವುದುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.

ಈ ಬಾರಿಯೂ ಕೊರೊನಾದಿಂದ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಯುತ್ತಾ ಅಂತ ಚರ್ಚೆಯಾಗಿತ್ತು. ಆದ್ರೆ ಉತ್ತರ ಕರ್ನಾಟಕ ಭಾಗದ ಸಿಎಂ, ಸಭಾಪತಿ, ಸಭಾಧ್ಯಕ್ಷರು ಇರುವುದರಿಂದ ನಾವು ಇಲ್ಲೇ ಮಾಡ್ಲೇಬೇಕು ಅಂತ ಚಳಿಗಾಲದ ಅಧಿವೇಶನ ಮಾಡಿದ್ದೇವೆ. ನಾನು ಸಿಎಂ ಬಳಿ ಎರಡು ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಜಂಟಿ ಅಧಿವೇಶನ ನಡೆಸಬೇಕು ಅಥವಾ ಹೆಚ್ಚು ದಿನವಾದ್ರೂ ನಡೆಸಬೇಕು ಅಂತ ಸಿಎಂ ಬಳಿ ಪ್ರಸ್ತಾಪ ಮಾಡಿದ್ದೇನೆ. ಶಾಸಕರ ಭವನ ಹಾಗೂ ಸೆಕ್ರೆಟರಿ ಕಚೇರಿಯಾಗ್ಬೇಕು ಅಂತ ಪ್ರಸ್ತಾಪ ಮಾಡಿದ್ದೇವೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

Share Post