Politics

ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಹರಾಜು; ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿ

ಬೆಂಗಳೂರು; ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಆರಂಭವಾಗಿದ್ದರೂ ಕಾಂಗ್ರೆಸ್‌ ಸರ್ಕಾರ ಕುಂಭಕರ್ಣನ ನಿದ್ರೆ ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನವನ್ನು ಸರ್ಕಾರ ಹರಾಜು ಹಾಕಿದೆ. ಬರಗಾಲದ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಿಸದ ಸರ್ಕಾರದ ವಿರುದ್ಧ ಸೋಮವಾರ ಪ್ರತಿಭಟಿಸಲಾಗುವುದು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

 

ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದಲ್ಲಿ ಹಣ ಕೊರತೆಯಾಗಿರುವುದರಿಂದ ಬರ ಘೋಷಣೆ ಮಾಡಲು ತಡ ಮಾಡಿದ್ದಾರೆ. ಜೊತೆಗೆ ಪರಿಹಾರ ನೀಡುವುದನ್ನು ಮುಂದೂಡಿದ್ದಾರೆ. ಹಳ್ಳಿಗಳಲ್ಲಿ ಜನರು ವಲಸೆ ಹೋಗುತ್ತಿದ್ದರೂ ಅದನ್ನು ಸರ್ಕಾರ ಒಪ್ಪಿಕೊಳ್ಳುತ್ತಿಲ್ಲ. ಇಂತಹ ಎಲ್ಲ ಸಮಸ್ಯೆಗಳನ್ನು ಮುಚ್ಚಿಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ. *ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳಲ್ಲೂ* ಈ ಕುರಿತು ಸುದ್ದಿಗಳು ಬರುತ್ತಿವೆ. ಇದರಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರಿನ ಮಾನ ಮರ್ಯಾದೆಯನ್ನು ಸರ್ಕಾರ ಹರಾಜು ಹಾಕಿದೆ ಎಂದರು.

ಬೆಂಗಳೂರಿಗೆ ಐಟಿ ಸಿಟಿ, ಬಿಟಿ ಸಿಟಿ ಎಂಬ ಹೆಸರಿದ್ದು, ಎಲ್ಲ ದೇಶಗಳಿಂದ ಜನರು ಇಲ್ಲಿಗೆ ಬರುತ್ತಾರೆ. ಕಾವೇರಿ ನೀರನ್ನು ಮೈತ್ರಿಕೂಟದ ಸದಸ್ಯರಾದ ತಮಿಳುನಾಡಿನ ಸಿಎಂಗೆ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಶೇ.60 ರಷ್ಟು ಬೋರ್‌ವೆಲ್‌ ಖಾಲಿಯಾಗಿದೆ. ಕಾವೇರಿ ಪೂರೈಕೆಯಲ್ಲಿ *ಶೇ.30 ರಷ್ಟು ನೀರನ್ನು ಕಡಿತಗೊಳಿಸಿದ್ದಾರೆ.* ಡೆಡ್‌ ಸ್ಟೋರೇಜ್‌ ಹೊರತುಪಡಿಸಿ ಕಾವೇರಿಯಲ್ಲಿ 8 ಟಿಎಂಸಿ ನೀರು ಉಳಿದಿದೆ. ಬಿಸಿಲು ಹೆಚ್ಚಿರುವುದರಿಂದ ಅದು ಇನ್ನಷ್ಟು ಖಾಲಿಯಾಗಲಿದೆ. ರೈತರು ಕೃಷಿಗೆ ಕಾವೇರಿ ನೀರನ್ನೇ ಅವಲಂಬಿಸಿದ್ದಾರೆ. ಬೆಂಗಳೂರಿನಲ್ಲಿ ಲಂಗು ಲಗಾಮಿಲ್ಲದೆ ಟ್ಯಾಂಕರ್‌ಗಳು ಓಡಾಡುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ದೂರಿದರು.

ಕಲುಷಿತ ನೀರು ಪೂರೈಕೆ, ಖಾಸಗಿ ಬೋರ್‌ವೆಲ್‌ ಸುಪರ್ದಿಗೆ ಪಡೆಯಿರಿ

ಯಾವುದೇ ಖಾಸಗಿ ಬೋರ್‌ವೆಲ್‌ನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗೆ ಅಧಿಕಾರವಿದೆ. ಅದನ್ನು ಮಾಡಲು ಸರ್ಕಾರಕ್ಕೆ ಮನಸ್ಸಿಲ್ಲದಿರುವುದರಿಂದ *ಟ್ಯಾಂಕರ್‌ಗಳು ಕಾಳ ಸಂತೆ ಸೃಷ್ಟಿಸಿವೆ.* ಕಲುಷಿತ ನೀರನ್ನು ಜನರಿಗೆ ನೀಡುತ್ತಿದ್ದರೂ *ಆರೋಗ್ಯ ಇಲಾಖೆ ಏನೂ ಕ್ರಮ ಕೈಗೊಳ್ಳದೆ* ಸತ್ತುಹೋಗಿದೆ. ಎಲ್ಲಿಯೂ ತಪಾಸಣೆ ಮಾಡುತ್ತಿಲ್ಲ. ಯಾವ ಬೋರ್‌ವೆಲ್‌ನಲ್ಲಿ ಎಷ್ಟು ಕಲುಷಿತ ಅಂಶ ಇದೆ ಎಂಬುದನ್ನು ತಪಾಸಣೆ ಮಾಡುತ್ತಿಲ್ಲ ಎಂದರು.

 

ಜನರು ಬಿಂದಿಗೆ ಹಿಡಿದುಕೊಂಡು ರಸ್ತೆಗೆ ಬಂದಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರ *ಹೆಚ್ಚುವರಿ ನೀರನ್ನು ಪಂಪ್‌* ಮಾಡಬೇಕು. ಖಾಸಗಿ ಬೋರ್‌ವೆಲ್‌ಗಳನ್ನು ಬಿಬಿಎಂಪಿ ವಶಕ್ಕೆ ಪಡೆದು ಕ್ರಮ ವಹಿಸಬೇಕು. ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಒಂದು ಕಡೆ ಬಾಂಬ್‌ ಭೀತಿ, ಮತ್ತೊಂದು ಕಡೆ ನೀರಿನ ಆತಂಕವಿದೆ. ಬರಗಾಲದ ಸ್ಥಿತಿಯನ್ನು ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ. ಕಾವೇರಿ ನೀರನ್ನು ಉಳಿಸಿಕೊಳ್ಳಲು ಸರಿಯಾಗಿ ವಾದವನ್ನು ಮಾಡಿಲ್ಲ. ರೈತರು ಈಗಲೂ ಕಾವೇರಿಗಾಗಿ ಪ್ರತಿಭಟಿಸುತ್ತಿದ್ದಾರೆ ಎಂದರು.

ಬೀರ್‌ ಇದೆ, ನೀರಿಲ್ಲ

ಎಲ್ಲಿ ನೋಡಿದರೂ ಎಣ್ಣೆ ಅಂಗಡಿಗಳು ತೆರೆದಿರುತ್ತವೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳು ಮುಚ್ಚಿವೆ. ರಾಜ್ಯದಲ್ಲಿ ಬೀರ್‌ ಇದೆ, ನೀರಿಲ್ಲ ಎಂಬ ಸ್ಥಿತಿಯನ್ನು ಸರ್ಕಾರ ಸೃಷ್ಟಿಸಿದೆ ಎಂದು ಆರ್‌.ಅಶೋಕ ದೂರಿದರು.

Share Post