National

ಶಿರಡಿ ಸಾಯಿಬಾಬಾಗೆ ಮೂರೇ ದಿನದಲ್ಲಿ 5.1 ಕೋಟಿ ರೂಪಾಯಿ

ಶಿರಡಿ; ಗುರುಪೂರ್ಣಮೆಗೆ ಶಿರಡಿ ಸಾಯಿಬಾಬಾ ಮಂದಿರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಈ ವೇಳೆ ಭಕ್ತರು ಭಾರಿ ಪ್ರಮಾಣದ ಕಾಣಿಕೆಯನ್ನು ಶಿರಡಿ ಸಾಯಿಬಾಬಾರ ಹುಂಡಿಗೆ ಅರ್ಪಿಸಿದ್ದಾರೆ. ಮೂರು ದಿನದಲ್ಲಿ ಬರೋಬ್ಬರಿ 5 ಕೋಟಿ 12 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ. 

    ಗುರು ಪೂರ್ಣಿಮೆ ಅಂಗವಾಗಿ ಶಿರಡಿ ಸಾಯಿಬಾಬಾ ದೇಗುಲದಲ್ಲಿ ಮೂರು ದಿನಗಳ ವಿಶೇಷ ಉತ್ಸವ ಆಚರಣೆ ಮಾಡಲಾಗಿತ್ತು. ಈ ವೇಳೆ ಮೂರು ಲಕ್ಷಕ್ಕೂ ಹೆಚ್ಚು ಭಕ್ತರು ಇಲ್ಲಿಗೆ ಶಿರಡಿಗೆ ಭೇಟಿ ನೀಡಿದ್ದರು.  ಇವರಿಂದ ಒಟ್ಟು 5 ಕೋಟಿ12 ಲಕ್ಷದ 408 ರೂಪಾಯಿ ಸಂಗ್ರಹವಾಗಿದೆ. ಇದರಲ್ಲಿ 12 ದೇಶಗಳ 19 ಲಕ್ಷ 80 ಸಾವಿರದ 94 ರೂಪಾಯಿ ಮೌಲ್ಯದ ಕರೆನ್ಸಿ ಕೂಡಾ ಇದೆ.

  ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಪ್ರತಿ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಆದರೆ, ಕೋವಿಡ್​ನಿಂದಾಗಿ ಕಳೆದ ಎರಡು ವರ್ಷಗಳ ಕಾಲ ಹೆಚ್ಚಿನ ಭಕ್ತರು ಇಲ್ಲಿಗೆ ಆಗಮಿಸಿರಲಿಲ್ಲ. ಇದೀಗ, ಕೋವಿಡ್ ಮೇಲಿನ ಎಲ್ಲ ನಿರ್ಬಂಧ ತೆಗೆದು ಹಾಕಿರುವ ಕಾರಣ ಹೆಚ್ಚಿನ ಭಕ್ತರು ಭೇಟಿ ನೀಡಲು ಶುರು ಮಾಡಿದ್ದಾರೆ.

Share Post