ಮಹಾರಾಷ್ಟ್ರ ಸರ್ಕಾರದ ಬಹುಮತ ಸಾಬೀತು ವಿಚಾರ; ಉದ್ಧವ್ ಅರ್ಜಿ ಇಂದೇ ವಿಚಾರಣೆ
ನವದೆಹಲಿ; ನಾಳೆ ಸಂಜೆ ಐದು ಗಂಟೆಯೊಳಗೆ ಮಹಾರಾಷ್ಟ್ರದ ಮಹಾ ವಿಕಾಸ ಆಘಾಡಿ ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಸರ್ಕಾರದ ಪರವಾಗಿ ಸಲ್ಲಿಸಿರುವ ಅರ್ಜಿಯನ್ನು ಇಂದು ಸಂಜೆ 5 ಗಂಟೆಗೆ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಜೂನ್ 30ರಂದು ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದಾರೆ. ಇದನ್ನು ಪ್ರಶ್ನಿಸಿ ಶಿವಸೇನಾ ಮುಖ್ಯ ಸಚೇತಕ ಸುನೀಲ್ ಪ್ರಭು ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಶಿವಸೇನಾ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದರು. ಹೀಗಾಗಿ ಇಂದು ಸಂಜೆ 5 ಗಂಟೆಗೆ ಅರ್ಜಿಯನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾ. ಸೂರ್ಯಕಾಂತ್ ಅವರು ತಿಳಿಸಿದ್ದಾರೆ.