ತಮಿಳುನಾಡು ವಿರುದ್ಧ ವಾಟಾಳ್ ನಾಗರಾಜ್ ಗಡಿನಾಡ ಚಳುವಳಿ
ಬೆಂಗಳೂರು: ಕರ್ನಾಟಕಕ್ಕೆ ಸದಾ ಕಾಲ ಗಡಿನಾಡಿನ ಗಲಾಟೆ ಇದ್ದೇ ಇರುತ್ತೆ. ಮಹಾರಾಷ್ಟ್ರದವರು ಭಾಷೆ ವಿಚಾರವಾಗಿ, ಕೇರಳದವರು ಕನ್ನಡಪರ ಶಾಲೆಗಳ ವಿಚಾರವಾಗಿ, ತಮಿಳುನಾಡು ನೀರಿನ ವಿಚಾರವಾಗಿ ಸದಾ ಒಂದಿಲ್ಲೊಂದು ಖ್ಯಾತೆ ತೆಗೆಯುತ್ತಲೇ ಇರುತ್ತವೆ. ಇದೀಗ ತಮಿಳುನಾಡು ಮತ್ತು ಕರ್ನಾಟಕ ನಡುವಿನ ನೀರಿನ ವಿವಾದ ಮತ್ತೆ ಭುಗಿಲೆದ್ದಿದೆ. ಈ ಯೋಜನೆ ಕೈಗೆತ್ತಿಕೊಂಡಾಗಿನಿಂದ ತಮಿಳುನಾಡು ಏನಾದರೂ ಒಂದು ತಂತ್ರ ರೂಪಿಸುತ್ತಲೇ ಇರುತ್ತದೆ. ಶತಾಯಗತಾಯ ನೀರು ಉಳಿಸಬೇಕೆಂದು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಕೈಗೊಂಡಿದ್ದರು.
ಇದರ ಮುಂದುವರಿದ ಭಾಗವಾಗಿ ಇಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆಯನ್ನು ಸಂದೇಶವನ್ನು ರವಾನೆ ಮಾಡಿದ್ದಾರೆ. ಪಾದಯಾತ್ರೆ ಮಾಡುವುದರಿಂದ ಅವರು ಬಗ್ಗಲ್ಲ..ಕೊನೆಯದಾಗಿ ನಿಮಗೊಂದು ಎಚ್ಚರಿಕೆ ಕೊಡ್ತಿದ್ದೇನೆ. ಇನ್ನೊಮ್ಮೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದ್ರೆ. ರಾಜ್ಯದ ಉದ್ದಗಲಕ್ಕೂ ತಮಿಳುನಾಡು ಗಡಿ ಬಂದ್ ಮಾಡಬೇಕಾಗುತ್ತದೆ. ಒಂದೇ ಒಂದು ವಾಹನವನ್ನೂ ಒಳಗೆ ಬಿಡಿವುದಿಲ್ಲ. ತಮಿಳು ಸಿನಿಮಾಗಳನ್ನು ಬ್ಯಾನ್ ಮಾಡ್ತೇವೆ. ತಮಿಳುನಾಡು ವಿರುದ್ಧ ಇಂದಿನಿಂದಲೇ ಗಡಿನಾಡ ಚಳುವಳಿಯನ್ನು ಮಾಡುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.