ತೆಲಂಗಾಣ ರಾಜಕೀಯ; ಕಾಂಗ್ರೆಸ್ ತೊರೆದ ಹಿರಿಯ ನಾಯಕ ಪೊನ್ನಲ ಲಕ್ಷ್ಮಯ್ಯ
ಹೈದರಾಬಾದ್; ಮೊನ್ನೆಯಷ್ಟೇ ತೆಲಂಗಾಣ ಚುನಾವಣೆ ಘೋಷಣೆಯಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಎಲ್ಲಾ ಪಕ್ಷಗಳೂ ಕಸರತ್ತು ಮಾಡುತ್ತಿವೆ. ಈ ಬೆನ್ನಲ್ಲೇ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಸಚಿವ ಹಾಗೂ ಮಾಜಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಪೊನ್ನಲ ಲಕ್ಷ್ಮಯ್ಯ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಪಕ್ಷದಲ್ಲಿ ಅವಮಾನ ಮಾಡಲಾಗಿದೆ. ಹೀಗಾಗಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪಿಸಿಸಿ ಅಧ್ಯಕ್ಷರ ಬಳಿ ಮಾತನಾಡಲು ಹಲವು ಬಾರಿ ಪ್ರಯತ್ನಿಸಿದರೂ ಅಪಾಯಿಂಟ್‌ಮೆಂಟ್ ಕೂಡ ನೀಡಿಲ್ಲ ಎಂದು ಆರೋಪಿಸಿದರು.
ಹೊರಗೆ ಭೇಟಿಯಾದಾಗಲೂ ಮಾತನಾಡದೆ, ನೋಡದೆ ಅವಮಾನ ಮಾಡಿದ ಸಂದರ್ಭಗಳೂ ಇವೆ ಎಂದು ಪತ್ರದಲ್ಲಿ ಬರೆದಿದ್ದಾರೆ. ಫೋನ್ ನಲ್ಲಿ ಮಾತನಾಡಲು ಯತ್ನಿಸಿದರೆ ಒಮ್ಮೆಯಾದರೂ ಉತ್ತರಿಸಲಿಲ್ಲ. ಪಕ್ಷದಲ್ಲಿ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.